

ಬೆಳಗಾವಿ: ನಗರದಲ್ಲಿ ಖಾಸಗಿ ತರಕಾರಿ ಸಗಟು ಮಾರುಕಟ್ಟೆ ಕಾರ್ಯಾರಂಭ ಮಾಡಿದ್ದರಿಂದ ರೈತರು ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿರುವ ವರ್ತಕರಿಗೆ ಸಾಕಷ್ಟು ನಷ್ಟವಾಗುತ್ತಿದೆ. ಇದರಿಂದ ಸರ್ಕಾರಕ್ಕೂ ಕೋಟ್ಯಂತರ ರೂ. ತೆರಿಗೆ ತಪ್ಪುತ್ತಿದೆ.
ಆದರೂ ಜಿಲ್ಲಾ ಉಸ್ತುವಾರಿ ಸಚಿವರು ಇತ್ತ ಗಮನ ಹರಿಸದಿರುವುದು ದುರ್ದೈವದ ಸಂಗತಿ ಎಂದು ಭಾರತೀಯ ಕೃಷಿಕ ಸಮಾಜದ ಅಧ್ಯಕ್ಷ ಸಿದ್ದಗೌಡ ಮೋದಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದ ಎಪಿಎಂಸಿ ಕಚೇರಿ ಮುಂಭಾಗದಲ್ಲಿ ಸೋಮವಾರದಿಂದ ಏಕಾಂಗಿಯಾಗಿ ಆಮರಣ ಉಪವಾಸ ಧರಣಿ ಆರಂಭಿಸಿ ಮಾತನಾಡಿದ ಅವರು, ಗಾಂಧಿ ನಗರದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಿರ್ಮಾಣವಾಗಿರುವ ಜೈ ಕಿಸಾನ್ ತರಕಾರಿ ಮಾರುಕಟ್ಟೆಯಿಂದಾಗಿ ಎಪಿಎಂಸಿ ವರ್ತಕರನ್ನು ಸಂಕಷ್ಟಕ್ಕೆ ತಳ್ಳುತ್ತಿದೆ. ಕೇಂದ್ರ ಸರ್ಕಾರವು ಎಪಿಎಂಸಿ ಖಾಸಗೀಕರಣದ ಕೃಷಿ ಮಸೂದೆ ಹಿಂಪಡೆದರೂ ರಾಜ್ಯದಲ್ಲಿ ಹಿಂಪಡೆಯಲಾಗಿಲ್ಲ ಎಂದು ದೂರಿದರು.
ಕಾನೂನು ಬಾಹಿರವಾಗಿ ಖಾಸಗಿ ಮಾರುಕಟ್ಟೆ ನಿರ್ಮಿಸಿದ್ದಾರೆ. ಇದರಲ್ಲಿ ಎಪಿಎಂಸಿ ಕಾರ್ಯದರ್ಶಿ, ಮಹಾನಗರ ಪಾಲಿಕೆ ಹಾಗೂ ಬುಡಾದಿಂದ ಲೋಪದೋಷವಾಗಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನೆ ನಡೆಸಿದರೂ ಸಂಬಂಧಿಸಿದ ಅಧಿಕಾರಿಗಳೂ ಸಹ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಡಿಸಿ ಎಂ.ಜಿ.ಹಿರೇಮಠ, ಈಗಾಗಲೇ ಖಾಸಗಿ ಮಾರುಕಟ್ಟೆಗೆ ಸಂಬಂಧಿಸಿದಂತೆ ಆಪಾದಿತ ಅಧಿಕಾರಿಗಳನ್ನು ಹೊರತುಪಡಿಸಿ ಬೇರೆ ಐದು ಅಧಿಕಾರಿಗಳನ್ನು ತನಿಖಾ ಸಮಿತಿಗೆ ನೇಮಕ ಮಾಡುವುದಾಗಿ ಭರವಸೆ ನೀಡಿದರು. ಕರ್ನಾಟಕ ರೈತ ಸಂಘ, ನೇಗಿಲಯೋಗಿ ರೈತ ಸಂಘದ ಅಧ್ಯಕ್ಷ ಧರ್ಮರಾಜ ಗೌಡರ, ಸಿಐಟಿಯು ಜಿಲ್ಲಾಧ್ಯಕ್ಷ ಜಿ.ವಿ. ಕುಲಕರ್ಣಿ, ವರ್ತಕರಾದ ಸತೀಶ ಪಾಟೀಲ, ಬಸನಗೌಡ ಪಾಟೀಲ, ಗಜಾನನ ಶಹಾಪುರಕರ, ಸದಾನಂದ ಪಾಟೀಲ, ಸುರೇಶ ಮೊದಗೇಕರ ಇತರರು ಇದ್ದರು.