ಉಸಿರು ಹೋಗುವ ಮುನ್ನ ಹೆಸರು ಗಳಿಸಿ

Make a name for yourself before you die
ಹುಟ್ಟೂರು ಗೊಳಸಂಗಿ ಗ್ರಾಮಕ್ಕೆ ಮಂಗಳವಾರ ಸಂಜೆ ಆಗಮಿಸಿದ ನಿವೃತ್ತ ಯೋಧ ರಮೇಶ ಪವಾರ ಹಾಗೂ ಪತ್ನಿ ಚೈತ್ರಾ ಅವರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಸಹದೇವ ಪವಾರ, ಗಂಗಾರಾಮ ಪವಾರ, ನಾರಾಯಣ ಸಾಳುಂಕೆ ಮತ್ತಿತರರು ಇದ್ದರು.
Published on

ಗೊಳಸಂಗಿ: ವ್ಯಕ್ತಿ ಜನಿಸಿದಾಗ ಉಸಿರು ಮಾತ್ರ ಇರುತ್ತೆ. ಹೆತ್ತವರು ನಾಮಕರಣ ಮಾಡುತ್ತಾರೆ. ಆ ಹೆಸರು ಚಿರಸ್ಥಾಯಿಯಾಗಿ ಉಳಿಯಲು ಉಸಿರು ನಿಲ್ಲುವ ಮುನ್ನ ಈ ಸಮಾಜ, ದೇಶ ಸ್ಮರಿಸುವಂತೆ ಸಾಧಕರಾಗಿ ಎಂದು ಮುದ್ದೇಬಿಹಾಳ ತಾಲೂಕು ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಆರ್.ಐ. ಹಿರೇಮಠ ಹೇಳಿದರು.

ದೇಶದ ವಿವಿಧೆಡೆ 20ವರ್ಷಗಳ ಕಾಲ ಗಡಿ ರಕ್ಷಕನಾಗಿ ಸೇವೆ ಸಲ್ಲಿಸಿ ಮಂಗಳವಾರ ಸಂಜೆ ಹುಟ್ಟೂರು ಗೊಳಸಂಗಿಗೆ ಆಗಮಿಸಿದ ಯೋಧ ರಮೇಶ ಪಾಂಡುರಂಗ ಪವಾರ ಅವರ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಒಬ್ಬ ಯೋಧ ತನ್ನ ಕುಟುಂಬದ ಜತೆಗೆ ಚಿಗುರೊಡೆಯುವ ಯೌವನವನ್ನೂ ತೊರೆದು ದೇಶದ ಗಡಿಯಲ್ಲಿ ಮಳೆ, ಗಾಳಿ, ಬಿಸಿಲನ್ನು ಲೆಕ್ಕಿಸದೆ ಮಂಜುಗಡ್ಡೆಯ ನಡುವೆ ಹುಟ್ಟು-ಸಾವಿನ ಕ್ಷಣಗಳನ್ನು ಅನುದಿನವೂ ಎಣಿಸುತ್ತ ದಶಕ ದಶಕಗಳ ಹಾದಿ ಸವೆಸಿರುತ್ತಾನೆ. ಅಂಥ ಸೈನಿಕರು ನಿವೃತ್ತಿಯಾಗಿ ಬಂದಾಗ ಗೌರವದಿಂದ ಕಾಣಿ ಎಂದರು.

ಸ್ಥಳೀಯ ಗ್ರಾಪಂ, ಸಂಘ-ಸಂಸ್ಥೆ, ಅಭಿಮಾನಿಗಳಿಂದ ರಮೇಶ ಹಾಗೂ ಪತ್ನಿ ಚೈತ್ರಾ ಅವರನ್ನು ಸನ್ಮಾನಿಸಲಾಯಿತು. ನಂತರ ಮಾತನಾಡಿದ ರಮೇಶ, ನಾನು ಆಕಸ್ಮಿಕವಾಗಿ ಸೇನೆ ಸೇರಿದೆ. ವಿವಿಧೆಡೆ ಗಡಿ ಕಾಯುವಾಗ ದೇಶದ ಬಗ್ಗೆ ಸ್ವಾಭಿಮಾನದ ಕಿಚ್ಚು ನನ್ನಲ್ಲೂ ಹೊತ್ತಿಕೊಂಡ ಪ್ರತಿಫಲವಾಗಿ ಸಂದ ಈ ಗೌರವ ನಾನೆಂದೂ ಮರೆಯಲಾರೆ ಎಂದರು.

ತಾಪಂ ಮಾಜಿ ಸದಸ್ಯ ಅಮೃತ ಯಾದವ, ಶಿಕ್ಷಕ ಮಂಜುನಾಥ ಯಾದವ ಮಾತನಾಡಿದರು. ಪ್ರಶಾಂತಸ್ವಾಮಿ ದೇವಾಂಗಮಠ ಸಾನ್ನಿಧ್ಯ ವಹಿಸಿದ್ದರು. ಮುದ್ದೇಬಿಹಾಳ, ನಿಡಗುಂದಿ ತಾಲೂಕಿನ ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳಾದ ಕೆ.ಎಂ. ತಾರನಾಳ, ಗೋಪಾಲ ಸಾರವಾರ, ಸಿ.ಐ. ಬಿದರಕುಂದಿ, ಎಸ್.ಎಸ್. ಅರಮನಿ, ಎಂ.ಬಿ. ವಠಾರ, ನಾರಾಯಣ ಸಾಳುಂಕೆ, ಚಂದ್ರಶೇಖರ ಅಬ್ಬಿಹಾಳ, ಬಸವರಾಜ ಗಣಿ, ವಿ.ಜಿ. ಕುಲಕರ್ಣಿ, ಎಸ್.ಎಸ್. ದೊಡಮನಿ, ವಸಂತ ಶಿಂಧೆ, ಯಲಗೂರಪ್ಪ ಜಟ್ಟಗಿ, ಎಸ್.ಬಿ. ಕೂಡಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net