ಉಸಿರಾಡಲು 8 ಸಸಿಗಳನ್ನು ನೆಟ್ಟು ಬೆಳೆಸಿ, ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಸಲಹೆ

05ank news and photos 07
Published on

ಆನೇಕಲ್: ಒಬ್ಬ ವ್ಯಕ್ತಿಗೆ ಉಸಿರಾಡಲು ಎಂಟು ದೊಡ್ಡ ಮರಗಳ ಅವಶ್ಯಕತೆ ಇದೆ. ಆದ್ದರಿಂದ, ಪ್ರತಿಯೊಬ್ಬರೂ ಎಂಟೆಂಟು ಸಸಿಗಳನ್ನು ನೆಟ್ಟು ಬೆಳೆಸಿ ಪರಿಸರ ಸಂರಕ್ಷಣೆ ಮಾಡಬೇಕು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಹೇಳಿದರು.

ತಾಲೂಕಿನ ಬ್ಯಾಗಡದೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂನಮಡಿವಾಳ ಗ್ರಾಮದ ಕೆರೆಯ ಅಂಗಳದಲ್ಲಿ ಶನಿವಾರ ಆಯೋಜನೆಗೊಂಡಿದ್ದ ಪರಿಸರ ದಿನಾಚರಣೆಯಲ್ಲಿ ಸಸಿ ನೆಟ್ಟು ಮಾತನಾಡಿದರು.

ಪರಿಸರ ಸಂರಕ್ಷಣೆ ಮಾಡಬೇಕಾದರೆ ಸುತ್ತಲು ಇರುವ ಕೆರೆ, ಕುಂಟೆ ಹಾಗೂ ಕಾಲುವೆಗಳು ಸರಿಯಾಗಿ ಇರಬೇಕು. ಕೆರೆಗಳಲ್ಲಿ ನೀರು ಇದ್ದರೆ ಗಿಡಗಳನ್ನು ಬೆಳೆಸಲು ಸುಲಭವಾಗುತ್ತದೆ. ಆದ್ದರಿಂದ, ರಾಜಕಾಲುವೆ, ಕುಂಟೆ, ಕೆರೆಗಳನ್ನು ಯಾರೇ ಒತ್ತುವರಿ ಮಾಡಿದ್ದರೂ, ಮುಲಾಜಿಲ್ಲದೆ ತೆರವುಗೊಳಿಸಲಾಗುವುದು ಎಂದರು.

ಸರ್ಕಾರಿ ಗುಂಡುತೋಪು, ಗೋಮಾಳ, ಹಾಗೂ ಕೆರೆಗಳ ಬಳಿ ಹೆಚ್ಚೆಚ್ಚು ಗಿಡಗಳನ್ನು ನೆಟ್ಟರೆ ಚೆನ್ನಾಗಿ ಬೆಳೆದುಕೊಳ್ಳುತ್ತವೆ. ಹಾಗಾಗಿ ಎಲ್ಲ ಕಡೆ ಸಾವಿರಾರು ಸಸಿಗಳನ್ನು ನೆಡಬೇಕು. ಕೆರೆಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿ, ಹೆಚ್ಚಿನ ಪ್ರಮಾಣದಲ್ಲಿ ನೀರು ಶೇಖರಣೆ ಆಗುವಂತೆ ಮಾಡುವ ಜತೆಗೆ ಅಂತರ್ಜಲಮಟ್ಟ ಹೆಚ್ಚಳಕ್ಕೂ ಸಹಕರಿಸಬೇಕು ಎಂದು ಹೇಳಿದರು.

ಶಾಸಕ ಬಿ. ಶಿವಣ್ಣ ಮಾತನಾಡಿ, ಅಭಿವೃದ್ಧಿ ಹೆಸರುನಲ್ಲಿ ಗಿಡ ಮರಗಳನ್ನು ನಾಶ ಮಾಡುವುದರಿಂದ, ಆಮ್ಲಜನಕದ ಕೊರತೆ ಉಂಟಾಗುತ್ತದೆ. ಹಾಗಾಗಿ ಪರಿಸರ ದಿನಾಚರಣೆಯಂದು ಮಾತ್ರ ಗಿಡಗಳನ್ನು ನೆಡದೆ, ವರ್ಷಪೂರ್ತಿ ಗಿಡಗಳನ್ನು ನೆಟ್ಟು ಬೆಳೆಸಬೇಕು ಎಂದು ಸಲಹೆ ನೀಡಿದರು.

ಬೆಂಗಳೂರು ನಗರ ಜಿಪಂ ಸಿಇಒ ಸಂಗಪ್ಪ ಮಾತನಾಡಿ, ಈ ವರ್ಷ ಪಂಚಾಯಿತಿ ವ್ಯಾಪ್ತಿಗಳಲ್ಲಿ 1.60 ಲಕ್ಷ ಗಿಡಗಳನ್ನು ನೆಡಲು ಯೋಜನೆ ರೂಪಿಸಿಕೊಂಡಿದ್ದೇವೆ. ಅದಕ್ಕಾಗಿ ಪರಿಸರವಾದಿ ಡಾ. ಯಲ್ಲಪ್ಪ ಅವರು 80 ಸಾವಿರ ಸಸಿಗಳನ್ನು ಕೊಡಿಸುತ್ತಿದ್ದಾರೆ ಎಂದರು.

ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ 421 ಕೆರೆಗಳು ಬರುತ್ತವೆ. ಹಂತ ಹಂತವಾಗಿ ಕೆರೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಅದರಂತೆ ಬ್ಯಾಗಡದೇನಹಳ್ಳಿ ಗ್ರಾಪಂ ವ್ಯಾಪ್ತಿಯ ಕೂನಮಡಿವಾಳ ಗ್ರಾಮದ ಕೆರೆಯನ್ನು ಎಸ್‌ಕೆಡಿಆರ್‌ಡಿಪಿ ಹಾಗೂ ಪಂಚಾಯಿತಿ ವತಿಯಿಂದ ಅಭಿವೃದ್ಧಿಪಡಿಸಲಾಗುತ್ತಿದೆ. ಕೆರೆಯ ಅಂಗಳದಲ್ಲಿ ಸಸಿಗಳನ್ನು ನೆಡಲಾಗುವುದು ಎಂದು ವಿವರಿಸಿದರು.

ತಹಸೀಲ್ದಾರ್ ಪಿ.ದಿನೇಶ್, ತಾಪಂ ಇಒ ಲಕ್ಷ್ಮೀನಾರಾಯಣ, ಬ್ಯಾಗಡದೇನಹಳ್ಳಿ ಗ್ರಾಪಂ ಅಧ್ಯಕ್ಷೆ ಶಾಂತಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net