

ಮಂಗಳೂರು: ದ.ಕ ಜಿಲ್ಲೆಯಲ್ಲಿ ಉಳ್ಳಾಲದ ಬಟ್ಟಂಪಾಡಿಯಿಂದ ಸಸಿಹಿತ್ಲು ವರೆಗಿನ ಬೀಚನ್ನು ಮ್ಯಾಪಿಂಗ್ ಮಾಡಿ, ವಿವಿಧ ವಲಯಗಳನ್ನಾಗಿ ಮಾಡಿ ಅವುಗಳಿಗೆ ಪೂರಕವಾಗಿ ಪ್ರವಾಸೋದ್ಯಮ ಅಭಿವೃದ್ಧಿಗೆ ಕಾರ್ಯಯೋಜನೆ ರೂಪಿಸಲು ಉದ್ದೇಶಿಸಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಡಾ.ರಾಜೇಂದ್ರ ಕೆ.ವಿ.ಹೇಳಿದರು.
ಬುಧವಾರ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಮತ್ತು ಕರ್ನಾಟಕ ಪ್ರವಾಸೋದ್ಯಮ ಸೊಸೈಟಿ (ಕೆಟಿಎಸ್) ವತಿಯಿಂದ ಓಶಿಯೆನ್‌ಪರ್ಲ್‌ನಲ್ಲಿ ಆಯೋಜಿಸಲಾದ ‘ಕನೆಕ್ಟ್ - 2024’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕರಾವಳಿಯಲ್ಲಿ ಮೆಡಿಕಲ್ ಟೂರಿಸಂ ಬಗ್ಗೆಯೂ ಹೆಚ್ಚಿನ ಆದ್ಯತೆ ನೀಡಲು ಉದ್ದೇಶಿಸಲಾಗಿದೆ. ರಾಜ್ಯದಲ್ಲಿ ಪ್ರವಾಸೋದ್ಯಮ ನೀತಿಯನ್ನು ಪರಿಷ್ಕೃತಗೊಳಿಸುವ ಕಾರ‌್ಯ ನಡೆಯುತ್ತಿದ್ದು, ಇದರಲ್ಲಿ ಕರಾವಳಿಯ ಪ್ರವಾಸೋದ್ಯಮಕ್ಕೆ ಸಂಬಂಸಿದಂತೆಯೂ ಆದ್ಯತೆ ನೀಡಲಾಗುತ್ತದೆ ಎಂದರು.
ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ ಕರಾವಳಿ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ಪರಿಷತ್ ರಚಿಸಲಾಗಿದೆ. ಕೆಟಿಎಸ್ ಜತೆ ಸಹಯೋಗದಲ್ಲಿ ಇದರ ಕಾರ್ಯಚಟುವಟಿಕೆಗಳನ್ನು ಮುಂದುವರಿಸಲು ಉದ್ದೇಶಿಸಲಾಗಿದೆ. ಸಿಆರ್‌ಝೆಡ್‌ಗೆ ಸಂಬಂಧಿಸಿದಂತೆಯೂ ಮಾಸ್ಟರ್‌ಪ್ಲಾನ್ ರಚಿಸಬೇಕಾಗಿದೆ. ಕರಾವಳಿ ಕರ್ನಾಟಕಕ್ಕೆ ಪ್ರತ್ಯೇಕ ಹೂಡಿಕೆದಾರರ ಸಮಾವೇಶ ಕಾರ್ಯಕ್ರಮವನ್ನೂ ಆಯೋಜಿಸಬೇಕು. ಜಿಲ್ಲೆಯನ್ನ ಧಾರ್ಮಿಕ ಪ್ರವಾಸೋದ್ಯಮದಿಂದ ಸಾಹಸ ಪ್ರವಾಸೋದ್ಯಮ ಕಡೆಗೆ ತೆಗೆದುಕೊಂಡು ಹೋಗುವ ಅಗತ್ಯವಿದೆ ಎಂದರು.
ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ, ಕರ್ನಾಟಕ ಪ್ರವಾಸೋದ್ಯಮ ಸೊಸೈಟಿ ಕಾರ್ಯಕಾರಿ ಸದಸ್ಯ ಅಯ್ಯಪ್ಪ ಸೋಮಯ್ಯ, ಜಿಪಂ ಸಿಇಒ ಡಾ.ಆನಂದ್ ಕೆ., ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಮಾಣಿಕ್ಯ ಜೈನ್, ದ.ಕ. ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಉಡುಪಿ ಹೊಟೇಲ್ ಮಾಲಕರ ಸಂಘದ ಅಧ್ಯಕ್ಷ ಮನೋಹರ್ ಶೆಟ್ಟಿ, ದಕ್ಷಿಣ ಕನ್ನಡ ಟೂರಿಸಂನ ಗೌರವ್ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕಾರಿ ಸದಸ್ಯ ಪಿ.ಸಿ.ರಾವ್ ಸ್ವಾಗತಿಸಿದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
-----------------
ಕಾಫಿಟೇಬಲ್ ಪುಸ್ತಕ ಸಿದ್ಧ
ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ ಅವರು ಮಾತನಾಡಿ, ಉಡುಪಿಗೆ ವರ್ಷದಲ್ಲಿ 2-3 ಕೋಟಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಸೈಂಟ್ ಮೇರಿಸ್ ದ್ವೀಪವೊಂದಕ್ಕೆ ಕಳೆದ ವರ್ಷ 22-23 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದರು. ಕೃಷಿ, ಸಾಹಸ, ಧಾರ್ಮಿಕ ಪ್ರವಾಸೋದ್ಯಮದ ಜತೆ ಜಾನಪದ ಪ್ರವಾಸೋದ್ಯಮ ಕಡೆಗೂ ಹೆಚ್ಚಿನ ಗಮನ ಹರಿಸಲಾಗುತ್ತಿದೆ. ಮುಂಗಾರಿನ ಮಳೆಯ ಮೂಲಕವೂ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮಾಡಬಹುದಾಗಿದೆ. ಜಿಲ್ಲೆಯ ಪ್ರವಾಸೀ ಮ್ಯಾಪ್‌ನಲ್ಲಿ ಇದ್ದ 35 ಸ್ಥಳಗಳ ಸಂಖ್ಯೆಯನ್ನು 85 ಏರಿಸಲಾಗಿದೆ. ಜತೆಗೆ ಪ್ರವಾಸಿತಾಣಗಳ ಸಮಗ್ರ ಮಾಹಿತಿಯುಳ್ಳ ಕಾಫಿಟೇಬಲ್ ಪುಸ್ತಕವನ್ನು ಸಿದ್ಧಪಡಿಸಲಾಗುತ್ತಿದೆ. ಪ್ರಾಕೃತಿಕ ಸಂಪತ್ತನ್ನು ಉಳಿಸಿ, ಮೂಲ ಸೌಕರ್ಯಗಳನ್ನು ಒದಗಿಸುವ ಅಗತ್ಯವಿದೆ. ಸುಸ್ತಿರ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಯೋಜನೆಗೆ ಉಡುಪಿ ಆಯ್ಕೆಯಾಗಿದ್ದು, 10 ಕೋ.ರೂ. ಮೊತ್ತದ ಯೋಜನೆ ಕೈಗೊಳ್ಳಲು ಇದರಿಂದ ಅವಕಾಶವಾಗಲಿದೆ ಎಂದರು.