ಉಳ್ಳಾಲ ಪೊಲೀಸರ ಮೇಲೆ ತಲವಾರು ಬೀಸಿ ಪರಾರಿಯಾದ ನಟೋರಿಯಸ್ ರೌಡಿ

crime
Published on

ಮಂಗಳೂರು : ವಾರಂಟ್ ಪ್ರಕರಣದಲ್ಲಿ ವಶಕ್ಕೆ ಪಡೆಯಲು ಉಳ್ಳಾಲಕ್ಕೆ ತೆರಳಿದ್ದ ಪೊಲೀಸರ ಮೇಲೆ ನಟೋರಿಯಸ್ ರೌಡಿಯೊಬ್ಬ ತಲವಾರು ಬೀಸಿ ಕೊಲೆಗೆ ಯತ್ನಿಸಿ ಪರಾರಿಯಾಗಿದ್ದಾನೆ. ಆತನಿಗೆ ಪರಾರಿಯಾಗಲು ಸಹಕರಿಸಿದ ಆರೋಪಿಯನ್ನು ಅಡ್ಡಗಟ್ಟಿ ಪೊಲೀಸರು ಬಂಧಿಸಿದ್ದಾರೆ.

ಮುಕ್ಕಚ್ಚೇರಿ ಬಳಿಯ ಧರ್ಮನಗರ ನಿವಾಸಿ ನಟೋರಿಯಸ್ ಕ್ರಿಮಿನಲ್ ಮುಕ್ತಾರ್ ಅಹ್ಮದ್ ಎಂಬಾತನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದರು. ಈತನ ಮೇಲೆ ಹತ್ತಕ್ಕೂ ಹೆಚ್ಚು ಕೇಸುಗಳಿದ್ದು, ಕೋರ್ಟಿಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಹೀಗಾಗಿ ಉಳ್ಳಾಲ ಪೊಲೀಸರು ಕೋರ್ಟಿನಿಂದ ವಾರಂಟ್ ಪಡೆದು ಇಂದು ಬೆಳಗ್ಗೆ ಬಂಧಿಸಲು ತೆರಳಿದ್ದರು. ಧರ್ಮನಗರದ ಮನೆಗೆ ತೆರಳಿದ್ದಾಗ ತಲವಾರು ಹಿಡಿದೇ ಹೊರಬಂದ ಮುಕ್ತಾರ್, ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಅಲ್ಲಿಂದ ತಲವಾರು ತೋರಿಸುತ್ತಲೇ ಹತ್ತಿರದ ನಿಜಾಮುದ್ದೀನ್ ಎಂಬವನ ಬೈಕಿನಲ್ಲಿ ಪರಾರಿಯಾಗಿದ್ದಾನೆ.

ಪೊಲೀಸರು ಬೆನ್ನಟ್ಟಿದ್ದು ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿಯ ರಸ್ತೆಯಲ್ಲಿ ಅಡ್ಡಹಾಕಿ ಬೈಕನ್ನು ಹಿಡಿದಿದ್ದಾರೆ. ಆದರೆ, ಇದರ ನಡುವಲ್ಲೇ ಮುಕ್ತಾರ್ ಅಹ್ಮದ್ ಬೈಕಿನಿಂದ ಇಳಿದು ಪೊಲೀಸರ ಕಣ್ಣಪ್ಪಿಸಿ ಎಸ್ಕೆಪ್ ಆಗಿದ್ದಾನೆ. ಬೈಕಿನಲ್ಲಿದ್ದ ನಿಜಾಮುದ್ದೀನ್ ಪೊಲೀಸರು ಹಿಂಬಾಲಿಸಿ ಬಂದಿದ್ದನ್ನು ತಿಳಿದು ಎಸ್ಕೆಪ್ ಆಗುವ ಯತ್ನದಲ್ಲಿ ಮುಂದಿನಿಂದ ಬಂದ ವ್ಯಾಗನರ್ ಕಾರಿಗೆ ಡಿಕ್ಕಿಯಾಗಿ ರಸ್ತೆಗೆ ಬಿದ್ದಿದ್ದಾನೆ. ಈ ವೇಳೆ ನಿಜಾಮುದ್ದೀನನನ್ನು ಬಂಧಿಸಿದ್ದಾರೆ. ಈತ ಈ ಹಿಂದೆ ಟಾರ್ಗೆಟ್ ಗ್ಯಾಂಗ್ ಲೀಡರ್ ಇಲ್ಯಾಸ್ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ದಾವೂದ್ ಎಂಬಾತನ ತಮ್ಮನಾಗಿದ್ದು ಆತನ ಕ್ರಿಮಿನಲ್ ಹಿನ್ನೆಲೆಯ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net