ಮೈಸೂರು: ಉಳುಮೆ ಫೌಂಡೇಷನ್‌ನಿಂದ ನಗರದಲ್ಲಿ ಆ.27ರಂದು ಚೈತನ್ಯ ಕಳೆ ಗಿಡಗಳ ಪ್ರದರ್ಶನ ಮತ್ತು ಸಂವಾದ ಆಯೋಜಿಸಲಾಗಿದೆ.
ಬೋಗಾದಿ ರಸ್ತೆಯ ವಾಕ್ ಮತ್ತು ಶ್ರವಣ ಸಂಸ್ಥೆ ಬಳಿ ಇರುವ ಧ್ವನ್ಯಾಲೋಕದಲ್ಲಿ ಅಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆ ವರೆಗೆ ಚೈತನ್ಯ ಕಳೆಗಿಡಗಳಲ್ಲಿರುವ ಔಷಧ ಗುಣಗಳು ಹಾಗೂ ಅದರ ಮಹತ್ವವನ್ನು ತಿಳಿಸಿಕೊಡಲಾಗುವುದು ಎಂದು ಉಳುಮೆ ಫೌಂಡೇಷನ್‌ನ ವ್ಯವಸ್ಥಾಪಕ ನಿರ್ದೇಶಕ ಟಿಜಿಎಸ್ ಅವಿನಾಶ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕೃಷಿಕ ಹಾಗೂ ಲೇಖಕ ಎ.ಪಿ.ಚಂದ್ರಶೇಖರ್ ಅಧ್ಯಕ್ಷತೆ ವಹಿಸುವರು. ರಾಷ್ಟ್ರೀಯ ಸಲಹಾ ಮಂಡಳಿ ಉಪಾಧ್ಯಕ್ಷ ಮಲ್ಲಿನಾಥ ಹೆಮಾಡಿ ಹಾಗೂ ಪರಿಸರ ಅಧ್ಯಯನ ಕೇಂದ್ರದ ಸಂಶೋಧಕ ಮುರಳೀಧರ ಗುಂಗುರುಮಳೆ ಅವರು ಕಳೆಗಳಿಂದ ಆಹಾರ; ಆರೋಗ್ಯಕ್ಕೆ ಪರಿಹಾರ ಕುರಿತು ವಿಷಯ ಮಂಡನೆ ಮಾಡಲಿದ್ದಾರೆ. ಹವಾಗುಣ ಬದಲಾವಣೆ ಮತ್ತು ಸುಸ್ಥಿರ ಕೃಷಿಯಲ್ಲಿ ಕಳೆಗಿಡಗಳ ಮಹತ್ವ ಕುರಿತು ಜೋಗಿಬೈಲಿನ ಪರಿಸರ ವಿಜ್ಞಾನ ಉಪನ್ಯಾಸಕ ಜಿ.ಮನು ಮಾತನಾಡಲಿದ್ದಾರೆ ಎಂದು ತಿಳಿಸಿದರು.
ಕಳೆ ಎಂಬುದು ಜೀವದ್ರವ್ಯ, ಬೆಳೆಗದು ಅಮೂಲ್ಯ ವಿಷಯ ಕುರಿತು ಯಗಚಿಹಳ್ಳಿಯ ಸಾವಯವ ಕೃಷಿಕ ರಾಮಕೃಷ್ಣಪ್ಪ, ಬೆಳೆಯ ಸಮಗ್ರತೆ ಇರುವುದು ಕಳೆಯಲ್ಲಿ ವಿಷಯವಾಗಿ ಚಿಕ್ಕನಾಯಕನಹಳ್ಳಿಯ ಸಾಮಾಜಿಕ ಕಾರ್ಯಕರ್ತೆ ಎನ್.ಇಂದಿರಮ್ಮ, ಔಷಧ ಸಸ್ಯಗಳ ಪ್ರಾತ್ಯಕ್ಷಿಕೆ ಮತ್ತು ಅದರ ಮಹತ್ವವನ್ನು ಬಿಳಿಗಿರಿರಂಗನಬೆಟ್ಟದ ರಮ್ಯಾ, ರಾಮೇಗೌಡ ತಿಳಿಸಿಕೊಡಲಿದ್ದಾರೆ. ಚೈತನ್ಯ ಕಳೆಗಿಡಗಳಿಂದ ಕಷಾಯ ತಯಾರಿಕೆ ಕುರಿತು ನಾನು ತಿಳಿಸಿಕೊಡಲಿದ್ದೇನೆ. 13 ಜಿಲ್ಲೆಗಳಿಂದ 300 ವಿವಿಧ ತಳಿಯ ಕಳೆ ಗಿಡಗಳ ಪ್ರದರ್ಶನ ಮಾಡಲಾಗುವುದು ಎಂದು ವಿವರಿಸಿದರು.
ಪ್ರಕೃತಿಯ ಸಮತೋಲನವನ್ನು ಕಾಪಾಡಲು, ಜೀವಾಣುಗಳಿಗೆ, ಪ್ರಾಣಿ-ಪಕ್ಷಿಗಳಿಗೆ, ಮರ-ಗಿಡಗಳಿಗೆ ಅನ್ನ, ನೀರು, ಗಾಳಿ, ಬೆಳಕನ್ನು ಒದಗಿಸುತ್ತ, ಮಣ್ಣಿನ ಫಲವತ್ತತೆಯನ್ನು ವೃದ್ಧಿಸುತ್ತ, ಹ್ಯೂಮಸ್ ಸೃಷ್ಟಿಸುತ್ತ, ಮಳೆ ನೀರನ್ನು ಹಿಡಿದಿಟ್ಟುಕೊಳ್ಳುತ್ತ, ಮಣ್ಣಿನಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅದೆಷ್ಟೋ ಅಸಂಖ್ಯಾತ ಜೀವಸಂಕುಲಕ್ಕೆ ತನ್ನದೇ ಆದ ಕೊಡುಗೆಯನ್ನು ದಯಪಾಲಿಸುತ್ತಿರುವ ಜೀವ ಬೆಳೆಗಳು ಈ ಚೈತನ್ಯ ಕಳೆಗಳು. ಜತೆಗೆ, ಮನುಷ್ಯನ ಆರೋಗ್ಯವನ್ನು ಕಾಪಾಡುವಲ್ಲಿ, ರೋಗ ರುಜಿನಗಳಿಗೆ ಔಷಧವಾಗಿಯೂ, ನಮ್ಮ ಬೆಳೆಗಳಿಗೆ ಬರುವ ಕೀಟಗಳನ್ನು ತಡೆಗಟ್ಟುವ ಸಂಜೀವಿನಿಯಾಗಿಯೂ ಇವೆ ಎಂದು ಹೇಳಿದರು.
ಆದರೆ ನಾವು ಇಂಥ ಅಮೂಲ್ಯ ಕಳೆಯನ್ನ್ನು ಕಡೆಗಣಿಸುತ್ತಿದ್ದೇವೆ. ಅವುಗಳಲ್ಲಿರುವ ಔಷಧೀಯ ಸತ್ವವನ್ನು, ಅದರ ಉಪಯೋಗವನ್ನು ಅರಿಯುವಲ್ಲಿ ವಿಫಲರಾಗಿದ್ದೇವೆ. ಇಂತಹ ಸಮಯದಲ್ಲಿ ಪ್ರಕೃತಿಯ ಉಳಿವಿಗಾಗಿ ಪ್ರತಿಯೊಂದು ವೈವಿಧ್ಯತೆಯಿಂದ ಕೂಡಿದ ಬೆಳೆಯೂ ನಮಗೆ ಬಹಳ ಮುಖ್ಯ ಎಂದು ತಿಳಿಸಿ ಹೇಳುವ ಒಂದು ಸಣ್ಣ ಪ್ರಯತ್ನ ಇದಾಗಿದೆ. ಹಲವಾರು ತಜ್ಞರು ಭಾಗವಹಿಸುತ್ತಿದ್ದಾರೆ ಎಂದು ಹೇಳಿದರು.
ಸಾಮಾಜಿಕ ಕಾರ್ಯಕರ್ತ ಶಿವಲಿಂಗು ಇದ್ದರು.