ಉಳಿವಿಯಿಂದ ಕಲ್ಯಾಣವರೆಗೆ ೫೬೫ ಕಿ.ಮೀ ಪಾದಯಾತ್ರೆ

1blk4 (1)
Published on

ಭಾಲ್ಕಿ: ಬಸವಕಲ್ಯಾಣದಲ್ಲಿ ನವೆಂಬರ್ ೨೫, ೨೬ರಂದು ನಡೆಯುವ ೪೪ನೇ ಶರಣಕಮ್ಮಟ, ಅನುಭವ ಮಂಟಪ ಉತ್ಸವ ನಿಮಿತ್ತ ಉಳಿವಿಯಿಂದ ಬಸವಕಲ್ಯಾಣದವರೆಗೆ ಸುಮಾರು ೫೬೫ ಕಿ.ಮೀ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಧಾರವಾಡದ ಮನಗುಂಡಿಯ ಶ್ರೀ ಬಸವಾನಂದ ಸ್ವಾಮೀಜಿ ಹೇಳಿದರು.

೧೨ನೇ ಶತಮಾನದಲ್ಲಿ ಕಲ್ಯಾಣ ಕ್ರಾಂತಿ ವೇಳೆ ವಚನ ಸಾಹಿತ್ಯ ಉಳಿಸಲು ಚನ್ನಬಸವಣ್ಣ, ಅಕ್ಕನಾಗಮ್ಮ, ಮಡಿವಾಳ ಮಾಚಿದೇವರ ನೇತೃತ್ವದಲ್ಲಿ ಸಾವಿರಾರೂ ಶರಣರು ಉಳಿವಿಗೆ ತೆರಳಿದ್ದರು. ಅಲ್ಲಿಯೇ ವಚನ ಸಾಹಿತ್ಯ ಸಂರಕ್ಷಿಸಿ ಚನ್ನಬಸವಣ್ಣ ಲಿಂಗೈಕ್ಯರಾದರೂ. ಆ ಪವಿತ್ರ ಭೂಮಿಯಿಂದ ಅ.೨೯ರಂದು ಹೊರಟು ಬಸವಕಲ್ಯಾಣದವರೆಗೆ (ನ.೨೪) ಪಾದಯಾತ್ರೆ ನಡೆಯಲಿದೆ ಎಂದು ಪಟ್ಟಣದ ಹಿರೇಮಠದ ಸಂಸ್ಥಾನದಲ್ಲಿ ಗುರುವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪಾದಯಾತ್ರೆ ಜತೆಗೆ ಶಿವಾನುಭವ ಗೋಷ್ಠಿ, ಪ್ರಸ್ತುತ ಸಮಸ್ಯೆಗಳಾದ ಪರಿಸರ, ಪ್ಲಾಸ್ಟಿಕ್ ಬಳಕೆ, ಮಳೆ ನೀರಿನ ಸಂಗ್ರಹ, ಬಸವತತ್ವ ಪ್ರಸಾರ, ಶರಣರ ಸ್ಮರಣೋತ್ಸವ ಸೇರಿ ಕಲೆ, ಸಾಹಿತ್ಯ, ಆಧ್ಯಾತ್ಮ ಸಾಧನೆ, ತಪಸ್ಸು, ಸಂಗೀತ, ರಕ್ತದಾನ, ಅಂಗಾಂಗ ದಾನ ಕುರಿತು ಉಪನ್ಯಾಸ ಮೂಲಕ ಜನರಿಗೆ ತಿಳಿಸಿಕೊಡುವ ಸಂಚಾರಿ ಶಿವಾನುಭವ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಪಟ್ಟದಕಲ್ಲಿನಲ್ಲಿ ಮೋಳಿಗೆ ಮಾರಯ್ಯ, ಬಾದಾಮಿಯಲ್ಲಿ ಚೌಡಯ್ಯನವರ ಸ್ಮರಣೋತ್ಸವ ಆಯೋಜಿಸಲಾಗುತ್ತಿದೆ. ೨೭ ದಿನದ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವವರು ನಿರ್ದಿಷ್ಟ ನಮೂನೆಯಲ್ಲಿ ಕೇಳಿದ ಮಾಹಿತಿ ಭರ್ತಿ ಮಾಡಿ ನೀಡಬೇಕು. ಪ್ರತಿಯೊಬ್ಬರಿಗೂ ಐಡಿ ಕಾರ್ಡ್ ಕೊಡಲಾಗುತ್ತದೆ. ೨೦೦ ಜನ ಭಾಗಿಯಾಗಲಿದ್ದಾರೆ. ಮಾಹಿತಿಗೆ ೯೪೪೯೨೨೭೭೯೯, ೮೦೭೩೯೭೯೬೮೩ ಸಂಖ್ಯೆಗೆ ಸಂಪರ್ಕಿಸಲು ತಿಳಿಸಿದರು.

ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ನ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಅನುಭವ ಮಂಟಪ ಉತ್ಸವ ಬೃಹತ್ ಉತ್ಸವವಾಗಬೇಕು. ಶರಣಕಮ್ಮಟ, ಅನುಭವ ಮಂಟಪ ಉತ್ಸವ ಆರಂಭವಾದಗಿನಿಂದಲೇ ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರ ರಚನೆ, ೬೦೦ ಕೋಟಿ ರೂ. ಬಿಡುಗಡೆ ಸೇರಿ ಇತರ ಪ್ರಗತಿಪರ ಕಾರ್ಯ ನಡೆಯುತ್ತಿವೆ ಎಂದರು.

ಅನುಭವ ಮಂಟಪ ಉತ್ಸವಕ್ಕೆ ಬಸವಾನಂದ ಸ್ವಾಮೀಜಿ ಸಹಕಾರ ನೀಡಿದ್ದಾರೆ. ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬೇಕು. ನ.೨೪ರಂದು ಬಸವಕಲ್ಯಾಣಕ್ಕೆ ಆಗಮಿಸುವ ಪಾದಯಾತ್ರೆಗೆ ಬಸವೇಶ್ವರ ದೇವಸ್ಥಾನದಲ್ಲಿ ಸ್ವಾಗತ ಮಾಡಿಕೊಂಡು ಅನುಭವ ಮಂಟಪದ ವರೆಗೆ ತೆರಳುತ್ತೇವೆ ಎಂದರು. ಶ್ರೀ ಗುರುಬಸವ ಪಟ್ಟದ್ದೇವರು, ಶ್ರೀ ಮಹಾಲಿಂಗ ಸ್ವಾಮೀಜಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net