ಉಳಿದ 19 ವಾರ್ಡ್‌ಗಳಲ್ಲೂ ಅಮೃತ್ ಯೋಜನೆ ಜಾರಿ ಶೀಘ್ರ: ಸಚಿವ ಬೈರತಿ ಸುರೇಶ್

ಉಳಿದ 19 ವಾರ್ಡ್‌ಗಳಲ್ಲೂ ಅಮೃತ್ ಯೋಜನೆ ಜಾರಿ ಶೀಘ್ರ: ಸಚಿವ ಬೈರತಿ ಸುರೇಶ್
Published on

ಹಾಸನ: ನಗರಾಭಿವೃದ್ಧಿ ಪ್ರಾಧಿಕಾರದಿಂದ ಬೂವನಹಳ್ಳಿ ಸುತ್ತಮುತ್ತ ಗ್ರಾಮದ ರೈತರಿಂದ ಭೂಮಿ ಪಡೆದುಕೊಂಡು ಲೇವಟ್ ಕಾರ್ಯ ನಡೆಯುತ್ತಿದ್ದು, ಶೀಘ್ರದಲ್ಲೇ ಅರ್ಹ ಫಲಾನುಭವಿಗಳಿಗೆ ಸೈಟ್ ವಿತರಿಸಲಾಗುವುದು ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ತಿಳಿಸಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸೋಮವಾರ ಪ್ರಗತಿ ಪರಿಶೀಲನ ಸಭೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 980 ಕೋಟಿ ರೂ ವೆಚ್ಚದಲ್ಲಿ ಲೇಔಟ್ ಕಾಮಗಾರಿ ನಡೆಯುತ್ತಿದ್ದು ಈಗಾಗಲೇ ಶೇಕಡ 25ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸಭೆ ಮುಗಿದ ತಕ್ಷಣ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದರು.

ಈಗಾಗಲೇ 26 ಸಾವಿರ ಜನರು ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಲೇಔಟಿನಲ್ಲಿ 15ಸಾವಿರ ಜನರಿಗೆ ಮಾತ್ರ ನಿವೇಶನ ಲಭ್ಯವಾಗಲಿದೆ. ಉಳಿದ 11ಸಾವಿರ ಜನರಿಗೆ ಮತ್ತೆ ಬೇರೆ ಕಡೆ ಜಾಗ ನಿಗದಿ ಮಾಡಿ ಅಭಿವೃದ್ಧಿಪಡಿಸಿ ಅವರಿಗೂ ಕೂಡ ವಿತರಣೆ ಮಾಡುವಂತೆ ಸೂಚನೆ ನೀಡಿದರು.

ಕಾಮಗಾರಿಯನ್ನು 24 ತಿಂಗಳಲ್ಲಿ ಮುಗಿಸುವಂತೆ ಸೂಚನೆ ನೀಡಲಾಗಿದೆ. ಅಲ್ಲದೇ ಈಗಾಗಲೇ ಏಳು ತಿಂಗಳು ಕಳೆದಿದ್ದು, ಅತಿ ಶೀಘ್ರದಲ್ಲೇ ಅರ್ಹ ಫಲಾನುಭವಿಗಳಿಗೆ ಸೈಟ್‌ಗಳನ್ನ ಹಂಚಿಕೆ ಮಾಡಲು ನಿರ್ದೇಶನ ನೀಡಲಾಗಿದೆ ಉಳಿದಂತೆ ಕಾಮಗಾರಿಯನ್ನು ಪೂರ್ಣಗೊಳಿಸಲು ಅವರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ನಗರಾಭಿವೃದ್ಧಿ ಇಲಾಖೆ ವತಿಯಿಂದ ಕುಡಿಯುವ ನೀರು ಯುಜಿಡಿ ಸಮಸ್ಯೆಗಳ ಬಗ್ಗೆ ಈಗಾಗಲೇ ಅರಸೀಕೆರೆ ಮತ್ತು ಹಾಸನ ಕ್ಷೇತ್ರದ ಶಾಸಕರಿಂದ ಮಾಹಿತಿ ಪಡೆದುಕೊಂಡಿದ್ದೇನೆ. ಅವರು ಸಾಕಷ್ಟು ಸಮಸ್ಯೆಗಳನ್ನು ತಿಳಿಸಿದ್ದಾರೆ. ಅವುಗಳನ್ನು ಹಂತ ಹಂತವಾಗಿ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಸೋಮವಾರ ಜಿಲ್ಲೆಗೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದೇನೆ. ಬುಧವಾರ ಬೆಂಗಳೂರಿನಲ್ಲಿ ಮೈಸೂರು ವಿಭಾಗದ ವತಿಯಿಂದ ಅಧಿಕಾರಿಗಳ ಸಭೆ ಕರೆದಿದ್ದು, ಅಲ್ಲಿ ಚರ್ಚೆ ನಡೆಸಿ ಹಾಸನ ಸೇರಿದಂತೆ ಎಲ್ಲ ಜಿಲ್ಲೆಗಳಿಗೂ ಕೂಡ ಶಾಶ್ವತ ಪರಿಹಾರವನ್ನು ಕಂಡುಹಿಡಿಯುವ ನಿಟ್ಟಿನಲ್ಲಿ ಗಮನ ಹರಿಸಲಾಗುವುದು ಎಂದು ಹೇಳಿದರು.

ಎಸ್.ಎಂ. ಕೃಷ್ಣ ಬಡಾವಣೆಯಲ್ಲಿ ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಹಲವು ಸಮಸ್ಯೆಗಳಿದ್ದು ಈ ಬಗ್ಗೆ ಕೂಡ ಚರ್ಚಿಸಲಾಗಿದೆ. ಅಲ್ಲದೆ 15 ಕೋಟಿ ರೂ. ವೆಚ್ಚದಲ್ಲಿ ಟೆಂಡರ್ ಪ್ರಕ್ರಿಯೆ ಮುಗಿದಿದು,್ದ ಕೆಲಸ ನಡೆಯುತ್ತಿದೆ. ಅದನ್ನು ಕೂಡ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲಾಗುವುದು. ಅಮೃತ್ ಯೋಜನೆಯಲ್ಲಿ ಹಾಸನದಲ್ಲಿ 16 ವಾರ್ಡುಗಳಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಇನ್ನೂ 19 ವಾರ್ಡುಗಳಿಗೆ ಸಂಪರ್ಕ ಕಲ್ಪಿಸಲಾಗುವುದು. ಈ ಯೋಜನೆಗೆ ಯಾವ ಮೂಲದಿಂದ ಹಣ ಹಂಚಿಕೆ ಮಾಡಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ. ಶಿವಲಿಂಗೇಗೌಡ, ಹಾಸನ ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್, ಜಿಲ್ಲಾಧಿಕಾರಿ ಅರ್ಚನಾ ಎಂ.ಎಸ್, ಅಪರ ಜಿಲ್ಲಾಧಿಕಾರಿ ಆನಂದ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net