ಉಳಿಕೆ ಎಸ್‌ಎಫ್‌ಸಿ ಅನುದಾನಕ್ಕೆ ಸದಸ್ಯರ ಅನುಮೋದನೆ

15-pnp 1
Published on

ಪಾಂಡವಪುರ: ಪಾಂಡವಪುರ ಪುರಸಭೆಗೆ 2025-26ನೇ ಸಾಲಿಗೆ ಎಸ್‌ಎಫ್‌ಸಿ ಮುಕ್ತ ನಿಧಿಯಲ್ಲಿ ಬಂಡವಾಳ ಆಸ್ತಿ ಸೃಜನೆಗಾಗಿ ಹಂಚಿಕೆಯಾಗಿದ್ದ ಅನುದಾನಕ್ಕೆ ಗುರುವಾರ ಕರೆಯಲಾಗಿದ್ದ ತುರ್ತು ಸಭೆಯಲ್ಲಿ ಅನುಮೋದನೆ ಪಡೆಯಲಾಯಿತು.

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ಜ್ಯೋತಿಲಕ್ಷ್ಮೀಬಾಬು ಅಧ್ಯಕ್ಷತೆಯಲ್ಲಿ ನಡೆದ ತುರ್ತುಸಭೆಯಲ್ಲಿ ಸರ್ಕಾರದ ನಿರ್ದೇಶನದಂತೆ ಉಳಿಕೆಯಾಗಿರುವ ಎಸ್‌ಎಫ್‌ಸಿ ಅನುದಾನಕ್ಕೆ ಸದಸ್ಯರಿಂದ ಅನುಮೋದನೆ ಪಡೆದುಕೊಳ್ಳಲಾಯಿತು. ಎಸ್‌ಎಫ್‌ಸಿ ಅನುದಾನ ಒಟ್ಟು ಮೊತ್ತ 16 ಲಕ್ಷ ರೂ.ಗಳಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಕಾರ್ಯಕ್ರಮಕ್ಕೆ 1.16 ಲಕ್ಷ ರೂ., ವಿಕಲಚೇತನರ ಕಲ್ಯಾಣ ಕಾರ್ಯಕ್ರಮಕ್ಕೆ 0.80 ಲಕ್ಷ ರೂ., ಉಳಿಕೆ ಅನುದಾನದಲ್ಲಿ ಪಟ್ಟಣದಲ್ಲಿರುವ ಎರಡು ಹಿಂದು ಸ್ಮಶಾನಗಳನ್ನು 3.4 ಲಕ್ಷ ರೂ. ಅನುದಾನದಲ್ಲಿ ಮೂಲಸೌಕರ್ಯ ಕಲ್ಪಿಸಲು ಸಭೆ ಸರ್ವಾನುಮತದಿಂದ ಒಪ್ಪಿಗೆ ನೀಡಿತ್ತು.

ಪುರಸಭೆ 2023-24 ನೇ ಸಾಲಿನ 15ನೇ ಹಣಕಾಸು ಸಾಮಾನ್ಯ ಮೂಲ ಅನುದಾನದಡಿಯಲ್ಲಿ ಮಂಜೂರಾಗಿದ್ದ 44.50 ಲಕ್ಷ ರೂ.ನಲ್ಲಿ 2.10 ಲಕ್ಷ ರೂ. ವಿನಿಯೋಗಿಸಲಾಗಿದ್ದು, ಉಳಿಕೆ 42.40 ಲಕ್ಷ ರೂ. ಅನುದಾನಕ್ಕೆ ಬದಲಿ ಕ್ರಿಯಾಯೋಜನೆ ರೂಪಿಸಲಾಯಿತು. ತ್ಯಾಜ್ಯ ನೀರು ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಭೂಮಿ ನೀಡಿರುವ ಮಾಲೀಕರು ಪರಿಹಾರ ಕೋರಿ ಸಲ್ಲಿಸಿರುವ ಪ್ರಕರಣ ಪಟ್ಟಣದ ಜೆಎಂಎಫ್‌ಸಿ ಮತ್ತು ಹೈಕೋರ್ಟ್‌ನಲ್ಲಿ ಇತ್ಯಾರ್ಥವಾಗುವುದು ತಡವಾಗಿರುವುದರಿಂದ ಅದಕ್ಕಾಗಿ ಮೀಸಲಿರಿಸಿರುವ ಅನುದಾನದ ವಿನಿಯೋಗವಾಗುವ ಸಾಧ್ಯತೆ ವಿಳಂಬವಾಗುವ ಕಾರಣ ಆ ಅನುದಾನದ ಮರು ಕ್ರಿಯಾಯೋಜನೆ ರೂಪಿಸಿ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆದು ಘನತ್ಯಾಜ್ಯ ವಸ್ತು ವಿಲೇವಾರಿ ಘಟಕದ ಸಮಗ್ರ ಅಭಿವೃದ್ಧಿಗೆ ಕ್ರಮವಹಿಸಲು ತೀರ್ಮಾನಿಸಲಾಯಿತು.

2022-23 ಸಾಲಿನ 15ನೇ ಹಣಕಾಸು ಆಯೋಗದ ನಿರ್ಬಂಧಿತ ಅನುದಾನದಡಿಯಲ್ಲಿ 2.7 ಲಕ್ಷ ರೂ.ನಲ್ಲಿ ಪುರಸಭೆ ವ್ಯಾಪ್ತಿಯ ಬನ್ನಾರಮ್ಮ ದೇವಸ್ಥಾನ ಹಿಂಭಾಗ ಬೂದು ನೀರು ಸಂಸ್ಕರಣಾ ಘಟಕ ನಿರ್ಮಿಸಲು ಜಿಲ್ಲಾಧಿಕಾರಿಗಳಿಂದ ಅನುಮೋದನೆ ಪಡೆದು ನಿಯಮಾವಳಿ ಅನುಸಾರ ಟೆಂಡರ್ ಪ್ರಕ್ರಿಯೆ ಕೈಗೊಂಡು ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲಾಗಿತ್ತು. ಆದರೆ ಈ ಕಾಮಗಾರಿಗೆ ಸ್ಥಳೀಯರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಬದಲಿ ಕ್ರಿಯಾಯೋಜನೆ ರೂಪಿಸಲು ಅನುಮೋದನೆ ಪಡೆದುಕೊಳ್ಳಲಾಯಿತು.

ದೇಶದ್ರೋಹಿಗಳಿಗೆ ಹಕ್ಕುಗಳನ್ನು ಮೊಟಕುಗೊಳಿಸಬೇಕು.

ಪುರಸಭೆ ಸದಸ್ಯರ ಮಾತನಾಡಿ, ಭಾರತದಲ್ಲಿ ಹುಟ್ಟಿ ಇಲ್ಲೇ ವಾಸಿಸುವ ಬೆರಳೆಣಿಕೆ ಜನರು ದೇಶದ್ರೋಹದ ಕೃತ್ಯಗಳಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಭಾಗಿಯಾಗುತ್ತಿದ್ದಾರೆ. ಇಂತಹ ದೇಶದ್ರೋಹಿಗಳಿಗೆ ಸಂವಿಧಾನ ನೀಡಿರುವ ಮೂಲ ಹಕ್ಕುಗಳನ್ನು ನೀಡಬಾರದು. ಜತೆಗೆ ಮತದಾನದ ಹಕ್ಕು, ಪಡಿತರ ಚೀಟಿ, ಪಾಸ್‌ಪೋರ್ಟ್, ಜತೆಗೆ ಭಾರತದ ಪೌರತ್ವವನ್ನು ರದ್ದುಗೊಳಿಸಬೇಕು. ಈ ರೀತಿಯ ಕಠಿಣ ಕಾನೂನುಗಳನ್ನು ರೂಪಿಸಲು ಸರ್ಕಾರ ಮುಂದಾಗಬೇಕು. ಹಿಂದು, ಮುಸ್ಲಿಂ, ಬೌದ್ಧ, ಸಿಖ್ ಸೇರಿದಂತೆ ಯಾವುದೇ ಧರ್ಮ, ಜಾತಿಯವರು ದೇಶದ್ರೋಹದ ಕೆಲಸದಲ್ಲಿ ಭಾಗಿಯಾದರೆ ಅವರಿಗೆ ಕಠಿಣ ದಂಡನೆಯ ಶಿಕ್ಷೆ ವಿಧಿಸಬೇಕು. ಪಾಂಡವಪುರ ಪುರಸಭೆ ಈ ನಿರ್ಣಯವನ್ನು ಪುರಸಭೆ ಮುಖ್ಯಾಧಿಕಾರಿಗಳು ಸರ್ಕಾರಕ್ಕೆ ಕಳುಹಿಸಿಕೊಡಬೇಕು ಎಂದು ಆಗ್ರಹಿಸಿದರು.

ಪಟ್ಟಣದ ಬೀರಶೆಟ್ಟಹಳ್ಳಿ ಮತ್ತು ಶಾಂತಿನಗರದಲ್ಲಿರುವ ಹಿಂದು ಸ್ಮಶಾನಗಳಲ್ಲಿ ಮೂಲಸೌಕರ್ಯವಿಲ್ಲದೆ ಶವ ಸಂಸ್ಕಾರಕ್ಕಾಗಿ ಜನ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ತುರ್ತು ಸಭೆಯಲ್ಲಿ ಸ್ಮಶಾನ ಅಭಿವೃದ್ಧಿಗೆ 3.4 ಲಕ್ಷ ರೂ.ಮೀಸಲಿರಿಸಿ ಸಭೆಯ ಒಪ್ಪಿಗೆ ಪಡೆಯಲು ನಿರ್ಧರಿಸಲಾಗಿದೆ. ಅದರಂತೆ ಈ ಎರಡು ಸ್ಮಶಾನಗಳಿಗೆ ಇರುವ ಅನುದಾನವನ್ನು ಸಮಾನವಾಗಿ ಹಂಚಿಕೆ ಮಾಡಿ ಸ್ಮಶಾನಕ್ಕೆ ವಿದ್ಯುತ್ ದೀಪ, ಕುಡಿಯುವ ನೀರು ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವಂತೆ ಒತ್ತಾಯಿಸಿದರು.

ಯಶವಂತಕುಮಾರ್ ಮಾತನಾಡಿ, ಕೆಲ ಅನುದಾನಗಳಿಗೆ ಅನುಮೋದನೆ ಪಡೆದುಕೊಳ್ಳಲು ತುರ್ತು ಸಭೆ ಕರೆಯಲಾಗಿದೆ. ಆದರೆ ಈ ಹಿಂದಿನ ಸಭಾ ನಡಾವಳಿಕೆಗಳನ್ನು ಸದಸ್ಯರಿಗೆ ತಿಳಿಸುವ ಕೆಲಸವನ್ನು ಪುರಸಭೆ ಅಧ್ಯಕ್ಷರು ಮಾಡುತ್ತಿಲ್ಲ. ಈ ಹಿಂದಿನ ಸಭೆಯಲ್ಲಿ ಕೆಲ ವಿಚಾರಗಳಿಗೆ ನಾವು ಆಕ್ಷೇಪ ವ್ಯಕ್ತಪಡಿಸಿ ನಮ್ಮ ವಿರೋಧವನ್ನು ದಾಖಲು ಮಾಡುವಂತೆ ತಿಳಿಸಲಾಗಿತ್ತು. ಆದರೆ ನಾವು ಪ್ರಸ್ತಾಪಿಸಿರುವ ವಿಚಾರಗಳನ್ನು ನಡವಳಿಕೆಯಲ್ಲಿ ದಾಖಲು ಮಾಡಿಲ್ಲ. ಹೀಗಾಗಿ ಹಿಂದಿನ ನಡಾವಳಿಕೆಗಳನ್ನು ಓದಿ ನಂತರ ತುರ್ತುಸಭೆ ಮುಂದುವರೆಸಬೇಕು ಎಂದು ಪಟ್ಟು ಹಿಡಿದರು.

ಇದಕ್ಕೆ ಉತ್ತರ ನೀಡಿದ ಪುರಸಭೆ ಮುಖ್ಯಾಧಿಕಾರಿ ಸತೀಶ್‌ಕುಮಾರ್ ಅವರು, ಇದು ತುರ್ತು ಸಭೆ ಆಗಿರುವ ಕಾರಣಕ್ಕೆ ಸಾಮಾನ್ಯ ಸಭೆಯ ನಡಾವಳಿಗಳನ್ನು ಇಲ್ಲಿ ಓದಲು ಸಾಧ್ಯವಿಲ್ಲ. ಅಗತ್ಯವಿದ್ದರೆ ಈ ಹಿಂದಿನಸಭೆಯ ನಡಾವಳಿಗಳನ್ನು ವೈಯಕ್ತಿಕವಾಗಿ ನೀಡಲಾಗುವುದು ಎಂದರು.

ಸಭೆ ಪ್ರಾರಂಭಕ್ಕೂ ಮುನ್ನ ಪೆಹಲ್ಗಾಮ್ ದಾಳಿಯಲ್ಲಿ ಜೀವ ಕಳೆದುಕೊಂಡ ಭಾರತೀಯ ನಾಗರಿಕರು, ಯುದ್ಧದಲ್ಲಿ ವೀರ ಮರಣವನ್ನಪ್ಪಿದ್ದ ಭಾರತೀಯ ಸೇನೆ ಯೋಧರಿಗೆ ಸಂತಾಪ ಸೂಚಿಸಲಾಯಿತು. ಅದೇ ರೀತಿ ಪಾಕಿಸ್ತಾನದ ಒಳಗೆ ನುಗ್ಗಿ ಉಗ್ರರ ಅಡಗು ಧ್ವಂಸಗೊಳಿಸಿದ ಭಾರತೀಯ ಸೇನೆಯ ಯೋಧರಿಗೆ ಅಭಿನಂದನೆ ಸಲ್ಲಿಸಲಾಯಿತು.’

ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಸತೀಶ್‌ಕುಮಾರ್, ಇಂಜಿನಿಯರ್‌ಗಳಾದ ಚೌಡಪ್ಪ, ಯಶಸ್ವಿನಿ, ಸದಸ್ಯರಾದ ಎಂ.ಗಿರೀಶ್, ಆರ್.ಸೋಮಶೇಖರ್, ಲಾಯರ್ ಮುರುಳಿ, ಚಂದ್ರು, ಶಿವಕುಮಾರ್, ಜಯಲಕ್ಷ್ಮಮ್ಮ, ಗೀತಾ ಅರ‌್ಮುಗಂ, ಪಟೇಲ್ ರಮೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net