

ಬೆಳಗಾವಿ: ನಗರದ ಖಡೇಬಜಾರ್ ಠಾಣೆ ವ್ಯಾಪ್ತಿಯ ಖಡಕ್ ಗಲ್ಲಿಯಲ್ಲಿ ಉರುಸ್ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆಸಿದ ಘಟನೆ ಶುಕ್ರವಾರ ರಾತ್ರಿ ನಡೆದಿದ್ದು, ತಕ್ಷಣವೇ ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ.
ಉರುಸ್ ಮೆರವಣಿಗೆ ವೇಳೆ ಯುವಕರ ಮಧ್ಯೆ ವಾಗ್ವಾದ ನಡೆದಿದೆ. ಶನಿವಾರ ಖೂಟ್, ಜಾಲಗಾರ ಗಲ್ಲಿ ಮೂಲಕ ಹೋಗುತ್ತಿದ್ದ ಉರುಸ್ ಏಕಾಏಕಿ ಖಡಕ್ ಗಲ್ಲಿಗೆ ಬಂದಿದ್ದರಿಂದ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರತಿವರ್ಷ ನಡೆಯುತ್ತಿದ್ದ ಮೆರವಣಿಗೆ ಮಾರ್ಗ ಬದಲಿಸಿರುವ ವಿಷಯವಾಗಿ ನಡೆದ ಮಾತಿನ ಚಕಮಕಿ ಗಲಾಟೆಗೆ ಕಾರಣವಾಗಿದೆ.
ಈ ಸಂದರ್ಭದಲ್ಲಿ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ಹತೋಟಿಗೆ ತಂದು ಮೆರವಣಿಗೆ ಸಾಗಲು ಅನುವು ಮಾಡಿಕೊಟ್ಟಿದ್ದಾರೆ. ನಗರ ಪೊಲೀಸ್ ಆಯುಕ್ತ ಭೂಷನ್ ಬೋರಸೆ ಮತ್ತು ಅಧಿಕಾರಿಗಳು ಸ್ಥಳಕ್ಕೆ ಭೇಟಿ ಸಮುದಾಯ ಮುಖಂಡರೊಂದಿಗೆ ಚರ್ಚಿಸಿ, ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಿದ್ದಾರೆ.