ಉರುಳುಗಲ್ಲು ಮರಕಡಿತಲೆ ಪ್ರಕರಣ: ಪಾದಯಾತ್ರೆಗೆ ರೈತ ಸಂಘ ಬೇಷರತ್ ಬೆಂಬಲ

SGR WEB 2
Published on

ಸಾಗರ: ಅರಣ್ಯ ಇಲಾಖೆ ದೌರ್ಜನ್ಯ ಖಂಡಿಸಿ ಜನಪರ ಹೋರಾಟ ವೇದಿಕೆ ಇನ್ನಿತರೆ ಸಂಘಟನೆಗಳು ಆ.5ರಂದು ಕರೂರು ಭಾರಂಗಿ ಹೋಬಳಿಯ ಬಿಳಿಗಾರು ಪ್ರದೇಶದಿಂದ ಕಾರ್ಗಲ್‌ವರೆಗೆ ಹಮ್ಮಿಕೊಂಡಿರುವ ಪಾದಯಾತ್ರೆ ಮತ್ತು ಹೋರಾಟಕ್ಕೆ ರೈತ ಸಂಘ ಸಂಪೂರ್ಣ ಬೆಂಬಲ ಸೂಚಿಸುತ್ತಿದೆ ಎಂದು ರೈತ ಸಂಘ(ಡಾ. ಎಚ್.ಗಣಪತಿಯಪ್ಪ ಬಣ) ತಾಲೂಕು ಅಧ್ಯಕ್ಷ ದಿನೇಶ್ ಶಿರವಾಳ ತಿಳಿಸಿದ್ದಾರೆ.

ಎಪಿಎಂಸಿ ಪ್ರಾಂಗಣದಲ್ಲಿ ಬುಧವಾರ ಕರೆಯಲಾಗಿದ್ದ ರೈತ ಸಂಘದ ಸಭೆಯಲ್ಲಿ ಕೈಗೊಂಡ ನಿರ್ಣಯ ಕುರಿತು ಮಾತನಾಡಿದ ಅವರು, ಹೋರಾಟಕ್ಕೆ ಬೇಷರತ್ತು ಬೆಂಬಲ ವ್ಯಕ್ತಪಡಿಸುವ ಜತೆಗೆ ಪಾದಯಾತ್ರೆಯಲ್ಲಿ ನಾವು ಪಾಲ್ಗೊಳ್ಳುತ್ತೇವೆ ಎಂದರು. ಇದು ರೈತರ ಮೇಲೆ ಅರಣ್ಯ ಇಲಾಖೆ ನಡೆಸಿದ ದೌರ್ಜನ್ಯ ಖಂಡಿಸಿ ಹಮ್ಮಿಕೊಂಡಿರುವ ಪ್ರತಿಭಟನೆಯಾಗಿದ್ದು, ಇದಕ್ಕೆ ನಮಗೆ ಆಹ್ವಾನ ಇಲ್ಲ ಎಂದು ಯಾರೂ ಮೀನಮೇಷ ಎಣಿಸಬಾರದು. ಇಂತಹ ಜನಪರ, ಜೀವಪರ ಹೋರಾಟದಲ್ಲಿ ಎಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ರೈತ ಸಂಘದ ಪ್ರಮುಖರಾದ ಕುಮಾರ ಗೌಡ, ಹೊಯ್ಸಳ ಗಣಪತಿಯಪ್ಪ, ರಮೇಶ್ ಈ.ಕೆಳದಿ, ಸೂರಜ್, ಭದ್ರೇಶ್, ಕಿರಣ್ ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net