ಉರುಳು ಸೇವೆ ಮಾಡಿ ಪ್ರತಿಭಟನೆ

20230821_111750
Published on

ಶ್ರೀರಂಗಪಟ್ಟಣ: ತಮಿಳುನಾಡಿಗೆ ಕಾವೇರಿ ನೀರು ಹರಿಸಿರುವ ರಾಜ್ಯ ಸರ್ಕಾರ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ವಿರುದ್ಧ ಪಟ್ಟಣದಲ್ಲಿ ಮಡಿವಾಳ ಮಾಚೀದೇವ ಸಂಘಟನೆ ಕಾರ್ಯಕರ್ತರು ಸೋಮವಾರ ಉರುಳು ಸೇವೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.

ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಜಮಾವಣೆಗೊಂಡ ರೈತ ಸಂಘಟನೆ, ದಲಿತ ಸಂಘಟನೆ, ಕರವೇ, ಪ್ರಜ್ಞಾವಂತರ ವೇದಿಕೆ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರ ಸಮ್ಮುಖದಲ್ಲಿ ಮಡಿವಾಳ ಮಾಚಿದೇವ ಸಂಘಟನೆ ಅಧ್ಯಕ್ಷ ಮರಳಗಾಲ ಮಂಜುನಾಥ್ ಹಾಗೂ ಪಾಲಹಳ್ಳಿ ಗ್ರಾಮದ ರೈತ ಟಿ.ಗೋವಿಂದು ತಾಲೂಕು ಕಚೇರಿವರೆಗೂ ಉರುಳು ಸೇವೆ ನಡೆಸುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು.

ಮರಳಗಾಲ ಮಂಜುನಾಥ್ ಮಾತನಾಡಿ, ಜನಪ್ರತಿನಿಧಿಗಳ ಸ್ವಾರ್ಥ ರಾಜಕಾರಣದಿಂದ ಇಂದು ರಾಜ್ಯಕ್ಕೆ ಸತತ ಅನ್ಯಾಯವಾಗುತ್ತಿದೆ. ಕರ್ನಾಟಕದ ರೈತರು ಸರಿಯಾದ ನೀರಿಲ್ಲದೆ ಬೆಳೆ ಕಳೆದುಕೊಂಡು ಕೃಷಿ ಮಾಡಲಾಗದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತ ಮುಖಂಡರಾದ ಮರಳಗಾಲ ಕೃಷ್ಣೇಗೌಡ ಹಾಗೂ ಮಂಜೇಶ್‌ಗೌಡ ಮಾತನಾಡಿ, ಮೂರು ತಿಂಗಳ ಹಿಂದೆ ಅಣೆಕಟ್ಟೆಯಲ್ಲಿ ನೀರಿಲ್ಲದ ಕಾರಣ ನಮ್ಮ ಬೆಳೆಗಳಿಗೆ ನೀರು ಬಿಡುವುದಿಲ್ಲ ಎಂದು ಸರ್ಕಾರವೇ ಅಧಿಕೃತ ಘೋಷಣೆ ಮಾಡಿತ್ತು. ಇದೀಗ ಜಲಾಶಯ 113 ಅಡಿ ತುಂಬಿದ ಬಳಿಕ 60 ದಿನಗಳವರೆಗೆ ನೀರು ನೀಡುತ್ತೇವೆ ಎಂದು ಹೇಳಿ ತಮಿಳುನಾಡಿಗೆ ನೀರು ಹರಿಸುತ್ತಿರುವುದು ಖಂಡನೀಯ. ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಅಧಿಕೃತವಾಗಿ ಘೋಷಿಸಿ ರೈತರಿಗೆ ಬೆಳೆ ಪರಿಹಾರ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆಯಬೇಕೆಂದು ಆಗ್ರಹಿಸಿ ತಹಸೀಲ್ದಾರ್ ಜಿ.ಅಶ್ವಿನಿ ಅವರಿಗೆ ಮನವಿ ಸಲ್ಲಿಸಿದರು.
ಪ್ರಜ್ಞಾವಂತಿಕೆ ವೇದಿಕೆ ಅಧ್ಯಕ್ಷ ವೆಂಕಟೇಶ್, ಕರವೇ ಅಧ್ಯಕ್ಷ ಚಂದಗಾಲು ಶಂಕರ್, ಮುಖಂಡರಾದ ಚಿಕ್ಕತಮ್ಮೇಗೌಡ, ಪೀಸು ಕುಮಾರ್, ಹೊನ್ನಪ್ಪ, ಪಾನಿಪುರಿ ರವಿ ಇತರರಿದ್ದರು. ಸಂಘಟನೆಯ ತಾಲೂಕು ಅಧ್ಯಕ್ಷ ಮರಳಗಾಲ ಮಂಜುನಾಥ್ ಹಾಗೂ ರೈತ ಟಿ.ಗೋವಿಂದು ಉರುಳು ಸೇವೆ ಮಾಡುವ ಮೂಲಕ ಪ್ರತಿಭಟಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net