ಮಂಗಳೂರು: ನಗರದ ಹೊರ ವಲಯದ ಮರಕಡ ಗ್ರಾಮದ ಅಳೆಮೊಗರು ಎಂಬಲ್ಲಿ ಮುಳ್ಳು ಹಂದಿಯನ್ನು ಉರುಳಿಟ್ಟು ಹಿಡಿದು ಮಾಂಸ ಮಾಡಲು ಯತ್ನಿಸುತ್ತಿದ್ದಾಗ ಅರಣ್ಯಾಧಿಕಾರಿಗಳು ದಾಳಿ ನಡೆಸಿ, ಪ್ರಕರಣ ದಾಖಲಿಸಿದ್ದಾರೆ.
ಮೃತಪಟ್ಟ ಮುಳ್ಳು ಹಂದಿ, ಉರುಳು ಹಾಕಲು ಬಳಿಸಿದ ತಂತಿ ಮತ್ತು ಹಂದಿಯ ಮುಳ್ಳುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಕಾರ್ಯಾಚರಣೆ ಸಂದರ್ಭ ಆರೋಪಿಗಳು ಪರಾರಿಯಾಗಿದ್ದು, ಶೋಧನಾ ಕಾರ್ಯ ಮುಂದುವರೆದಿದೆ.
ವಲಯ ಅರಣ್ಯಾಧಿಕಾರಿ ಪಿ. ಶ್ರೀಧರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಉಪ ವಲಯ ಅರಣ್ಯಾಧಿಕಾರಿ ಸಂಜು ಡಿ. ಲಮಾಣಿ, ಅರಣ್ಯ ರಕ್ಷಕರಾದ ವೀಣಾ ಮತ್ತು ಸೋಮನಿಂಗ ಹಿಪ್ಪರಗಿ ಹಾಗೂ ಅರಣ್ಯ ವೀಕ್ಷಕರಾದ ಶಿವಪ್ರಸಾದ್ ಭಾಗವಹಿಸಿದ್ದರು.
ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ವಿ. ಕರಿಕಲನ್ ರವರ ನಿರ್ದೇಶನದಂತೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ರಹ್ಮಣ್ಯ ರಾವ್ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಯವರ ತಾಂತ್ರಿಕ ಸಹಾಯಕರು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.