

ಮೈಸೂರು: ಉರಿಗೌಡ ಮತ್ತು ನಂಜೇಗೌಡರ ಕಟ್ಟುಕಥೆಯ ಮೂಲಕ ಒಕ್ಕಲಿಗ ಸಮುದಾಯಕ್ಕೆ ಅಗೌರವ ತರಬೇಡಿ ಎಂದು ನಮ್ಮೂರು ನಮ್ಮೋರು ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಬೀಡನಹಳ್ಳಿ ಸತೀಶ್‌ಗೌಡ ಹೇಳಿದರು.
ಟಿಪ್ಪು ಸುಲ್ತಾನ್ ಕೊಂದಾತನ ಬಗೆಗೆ ಸುಳ್ಳು ಕತೆ ಹುಟ್ಟಿಕೊಳ್ಳುತ್ತಿರುವುದು ಶೋಚನೀಯ. ಕಪೋಲ ಕಲ್ಪಿತ ಸಂಗತಿ ಸೃಷ್ಟಿಸಿರುವುದು ಇತಿಹಾಸಕ್ಕೆ ಎಸಗುವ ಅಪಚಾರ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ಸಚಿವ ಡಾ.ಅಶ್ವತ್ಥನಾರಾಯಣ ಹಾಗೂ ಶಾಸಕ ಸಿ.ಟಿ.ರವಿ ಅವರು ತಮ್ಮ ರಾಜಕೀಯ ಸ್ವಾರ್ಥಕ್ಕೆ ಸಮುದಾಯವನ್ನು ಬಲಿ ಕೊಡಬೇಡಬಾರದು. ದಾಖಲೆಯೊಂದಿಗೆ ಬಹಿರಂಗ ಚರ್ಚೆ ಬನ್ನಿ. ಇಲ್ಲವಾದರೆ ಸಮುದಾಯದ ಕ್ಷಮೆ ಕೇಳಿ ಎಂದು ಆಗ್ರಹಿಸಿದರು.
ಸುಮಾರು 223 ವರ್ಷಗಳಲ್ಲಿ ಬೆಳಕಿಗೆ ಬಾರದ ಈ ಇತಿಹಾಸ ಇತ್ತೀಚೆಗೆ ದಿಢೀರ್ ಅಂತ ಬಂದದ್ದು ಹೇಗೆ ಎಂದು ಪ್ರಶ್ನಿಸಿದ ಅವರು, ವ್ಯಾಟ್ಸ್‌ಆ್ಯಪ್ ಯೂನಿವರ್ಸಿಟಿಯ ಜನ ತಮ್ಮ ಸ್ವಾರ್ಥಕ್ಕಾಗಿ ಉರಿ ನಂಜುವಿನ ಕಥೆ ಸೃಷ್ಟಿಸುವ ಮೂಲಕ ಒಕ್ಕಲಿಗರು ಸ್ವಾತಂತ್ರ್ಯದ ವಿರೋಧಿಗಳು ಎಂಬ ಅಭಿಪ್ರಾಯ ಮೂಡಿಸಲು ಯತ್ನಿಸುತ್ತಿದ್ದಾರೆ ಎಂದು ಟೀಕಿಸಿದರು.
ಸಮುದಾಯಕ್ಕೆ ಅಗೌರವ ತರುವ ಉದ್ಧಟತನ ತೋರಿದರೆ ಅದರ ಪರಿಣಾಮ ವ್ಯತಿರಿಕ್ತವಾಗಿರುತ್ತದೆ ಎಂದು ಎಚ್ಚರಿಸಿದರು.
ಒಕ್ಕಲಿಗರ ಸಂಘದ ನಿರ್ದೇಶಕ ಸಿ.ಜೆ.ಗಂಗಾಧರ್. ಜಿಲ್ಲಾಧ್ಯಕ್ಷ ಸಿ.ಮರಿಸ್ವಾಮಿ ಇನ್ನಿತರರು ಇದ್ದರು.