

ಧಾರವಾಡ: ಹಾವಿಗೂ ಕ್ಯಾನ್ಸರ್ ಬರುತ್ತದೆ ಎಂದರೆ ಆಚ್ಚರಿಯಾಗುವುದು ಸಹಜ. ಇದಕ್ಕೆ ನಿದರ್ಶನ ಧಾರವಾಡದಲ್ಲಿ ದೊರೆತಿದೆ. ಹಾವಿನ ತಲೆಯ ಭಾಗದಲ್ಲಿದ್ದ ಗಂಟನ್ನು ಗಮನಿಸಿ ಅದು ಕ್ಯಾನ್ಸರ್ ಎಂದು ಪತ್ತೆ ಮಾಡಿ ಅಪರೂಪದ ಶಸಚಿಕಿತ್ಸೆ ಮಾಡಿ ಶ್ರೇಯಸ್ಸು ನಗರದ ಕೃಷಿ ವಿಶ್ವವಿದ್ಯಾಲಯದ ಪಶುವೈದ್ಯ ಡಾ. ಅನಿಲಕುಮಾರ ಅವರಿಗೆ ಸಂದಿದೆ.
ನಗರದ ಪ್ರಾಣಿರಕ್ಷಕ ಸೋಮಶೇಖರ ಚನ್ನಶೆಟ್ಟಿ ಎಂಬುವರು ಇತ್ತೀಚೆಗೆ ಇಲ್ಲಿನ ಮನೆಯೊಂದಕ್ಕೆ ನುಗ್ಗಿದ್ದ ಆಭರಣ ಹಾವನ್ನು ರಕ್ಷಿಸಿದ್ದರು. ಅದನ್ನು ಕಾಡಿಗೆ ಬಿಡುತ್ತಿದ್ದ ವೇಳೆ ತಲೆಯ ಮೇಲೆ ಗಂಟು ಇರುವುದನ್ನು ಗಮನಿಸಿದ್ದಾರೆ. ಕೃಷಿ ವಿವಿಯ ಡಾ. ಅನಿಲಕುಮಾರ ಅವರನ್ನು ಸಂಪರ್ಕಿಸಿ ಚಿಕಿತ್ಸೆಗೆ ಒಯ್ದಿದ್ದಾರೆ. ತಪಾಸಣೆ ಮಾಡಿದ ಡಾ. ಅನಿಲಕುಮಾರ, ಅದು ಕ್ಯಾನ್ಸರ್ ಗಡ್ಡೆ ಎಂಬುದನ್ನು ಖಚಿತಪಡಿಸಿ ಶಸಚಿಕಿತ್ಸೆ ನಡೆಸಿದ್ದಾರೆ. ಹಾವಿನ ಕ್ಯಾನ್ಸರ್ ಗಡ್ಡೆಯನ್ನು ಹೊರತೆಗೆಯಲಾಗಿದ್ದು, ಸದ್ಯ ಹಾವು ಆರೋಗ್ಯವಾಗಿ ಸೋಮಶೇಖರ ಆರಕೆಯಲ್ಲಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಡಾ. ಅನಿಲಕುಮಾರ, ಪ್ರಾಣಿಗಳಲ್ಲಿ ಕ್ಯಾನ್ಸರ್ ರೋಗ ಸಹಜ. ಆದರೆ, ಇದೇ ಮೊದಲು ಬಾರಿಗೆ ಹಾವಿನಲ್ಲಿ ಪತ್ತೆಯಾಗಿತ್ತು. ಸುಮಾರು ಅರ್ಧ ಗಂಟೆ ಶಸಚಿಕಿತ್ಸೆ ಮಾಡಿ ಕ್ಯಾನ್ಸರ್ ಗಂಟನ್ನು ತೆಗೆಯಲಾಗಿದೆ. ಶಸಚಿಕಿತ್ಸೆ ಬಳಿಕ ಹಾವು ಆರೋಗ್ಯವಾಗಿದೆ ಎಂದಿದ್ದಾರೆ.