ಉಮ್ಮಚಗಿ, ಕುಂದರಗಿಯಲ್ಲಿ ಪಶುಸಂಗೋಪನಾ ಕಟ್ಟಡ ಕಳಪೆ

09 YLP 03
Published on

ಯಲ್ಲಾಪುರ: ತಾಲೂಕಿನ ಉಮ್ಮಚಗಿ ಹಾಗೂ ಕುಂದರಗಿಯಲ್ಲಿ ನಿರ್ವಿುಸಿದ ಪಶುಸಂಗೋಪನಾ ಇಲಾಖೆಯ ಕಟ್ಟಡಗಳು ಕಳಪೆಯಾಗಿವೆ. ಹೊಸ ಕಟ್ಟಡಗಳಾದರೂ ಪ್ರಾರಂಭದಿಂದಲೇ ಸೋರುತ್ತಿವೆ. ಇಂತಹ ಕಟ್ಟಡಗಳನ್ನು ನಿರ್ವಿುಸಿದ ಗುತ್ತಿಗೆದಾರರು ಸಾರ್ವಜನಿಕರ ಹಾಗೂ ಜನಪ್ರತಿನಿಗಳ ಯಾವ ಸಲಹೆಗೂ ಸ್ಪಂದನೆ ನೀಡುತ್ತಿಲ್ಲ ಎಂದು ತಾಪಂ ಸದಸ್ಯರು ದೂರಿದರು.

ಇಲ್ಲಿನ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಚಂದ್ರಕಲಾ ಭಟ್ ಅಧ್ಯಕ್ಷತೆಯಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಮಾತನಾಡಿದರು.

ಕಟ್ಟಡ ಕಾಮಗಾರಿ ಕಳಪೆಯಾಗಿದ್ದರೂ ತರಾತುರಿಯಿಂದ ಇಲಾಖೆಗೆ ಹಸ್ತಾಂತರ ಮಾಡಲಾಗಿದೆ. ಗುತ್ತಿಗೆದಾರರ ವಿರುದ್ದ ಜಿಲ್ಲಾಡಳಿತಕ್ಕೆ ದೂರು ನೀಡಬೇಕು. ಮುಂದಿನ ಕೆಡಿಪಿ ಸಭೆಗೆ ಕಟ್ಟಡ ನಿರ್ಮಾಣ ಜವಾಬ್ದಾರಿ ವಹಿಸಿಕೊಂಡವರು ಆಗಮಿಸಿ ಸ್ಪಷ್ಟೀಕರಣ ನೀಡಬೇಕು ಎಂದು ಠರಾವು ಸ್ವೀಕರಿಸಲಾಯಿತು.

ತಾಲೂಕು ಆರೋಗ್ಯಾಧಿಕಾರಿ ಡಾ. ನರೇಂದ್ರ ಪವಾರ್ ಮಾತನಾಡಿ, ತಾಲೂಕಿನಲ್ಲಿ ಕರೊನಾ ತಪಾಸಣೆಗೆ ಜನರು ಹಿಂದೇಟು ಹಾಕುತ್ತಿದ್ದಾರೆ. ವೈದ್ಯರಿಗೆ ಹಾಗೂ ಸಿಬ್ಬಂದಿಗೆ ಕೆಟ್ಟದಾಗಿ ಬೈಯ್ದು ಅವಮಾನಿಸುತ್ತಾರೆ. ವೈದ್ಯರು ಹಾಗೂ ಕರೊನಾ ಸೇನಾನಿಗಳು ಜೀವದ ಹಂಗು ತೊರೆದು ಕಾರ್ಯನಿರ್ವಹಿಸುತ್ತಿದ್ದರೂ ಜನರ ಈ ನಡವಳಿಕೆಯಿಂದ ನಾವು ಬೇಸರಿಸುವಂತಾಗಿದೆ ಎಂದರು. ಈ ಕುರಿತು ತಹಸೀಲ್ದಾರ್ ಗಣಪತಿ ಶಾಸ್ತ್ರಿ ಪ್ರತಿಕ್ರಿಯಿಸಿ, ಕರೊನಾ ಸೇನಾನಿಗಳ ಕೆಲಸಕ್ಕೆ ಅಡ್ಡಿ ಮಾಡುವವರ ಹಾಗೂ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡುವವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಆರೋಗ್ಯ ಇಲಾಖೆಯವರು ಸೂಚಿಸಿದ ವ್ಯಕ್ತಿಗಳು ಕರೊನಾ ಪರೀಕ್ಷೆಗೆ ಹಿಂದೇಟು ಹಾಕಬಾರದು. ಈ ಕುರಿತು ಜನಪ್ರತಿನಿಧಿಗಳು ಸಹ ಜನರಿಗೆ ಮನವರಿಕೆ ಮಾಡಬೇಕು ಎಂದರು.

ಅಧ್ಯಕ್ಷೆ ಚಂದ್ರಕಲಾ ಭಟ್ ಮಾತನಾಡಿ, ಕರೊನಾ ಕುರಿತು ಮುಂಜಾಗ್ರತೆ ಹಾಗೂ ಭಯ ನಿವಾರಣೆ ಮಾಡುವ ನಿಟ್ಟಿನಲ್ಲಿ ಕರಪತ್ರದ ಮೂಲಕ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದು ಸಲಹೆ ನೀಡಿದರು.

ಉದ್ಯೋಗ ಖಾತ್ರಿ ಯೋಜನೆಯ ಯಶಸ್ಸಿಗೆ ಶ್ರಮಿಸಿದ ಪಿಡಿಒಗಳಾದ ರಮೇಶ ರೆಡ್ಡಿ, ರಾಜೇಶ್ ಶೇಟ್, ಉದ್ಯೋಗ ಖಾತ್ರಿ ಯೋಜನೆಯ ಇಂಜಿನಿಯರ್ ಭವ್ಯಾ, ಈರಪ್ಪ ಯಲ್ಲಪ್ಪ ಗೊಂದಳಿ,

ಪ್ರಕಾಶ ಶೇಟ್, ಸಂತೋಷ ನಾಯ್ಕ, ಶಿವಾನಂದ ನಾಯ್ಕ ಅವರನ್ನು ಗೌರವಿಸಲಾಯಿತು. ಉಪಾಧ್ಯಕ್ಷೆ ಸುಜಾತಾ ಸಿದ್ದಿ, ಸ್ಥಾಯಿ ಸಮಿತಿಯ ಅಧ್ಯಕ್ಷೆ ಕವಿತಾ ತಿನೇಕರ, ಸದಸ್ಯರಾದ ನಾಗರಾಜ ಕವಡಿಕೆರೆ, ನಟರಾಜ ಗೌಡರ್, ಮಾಲಾ ಚಂದಾವರ, ಲಕ್ಷ್ಮೀನಾರಾಯಣ ಗುಮ್ಮಾನಿ, ತಾ.ಪಂ. ವ್ಯವಸ್ಥಾಪಕ ಶಿವರಾಮ ಆಚಾರ್ಯ, ನರೇಗಾ ಯೋಜನಾ ನಿರ್ದೇಶಕ ಯೋಗೇಂದ್ರ ಪಿ., ತಾ.ಪಂ. ಇಒ ಜಗದೀಶ ಕಮ್ಮಾರ್, ಜೆ.ಆರ್. ಭಟ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net