ಉಮೇದುವಾರಿಕೆ ಸಲ್ಲಿಕೆಗೆ ಇಂದು ಕೊನೇ ದಿನ

election
Published on

ಧಾರವಾಡ: ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿಯ ವಿಧಾನ ಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಬುಧವಾರ 7 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಇದುವರೆಗೆ 9 ಅಭ್ಯರ್ಥಿಗಳಿಂದ 10 ನಾಮಪತ್ರಗಳು ಸಲ್ಲಿಕೆಯಾಗಿವೆ.

ಕಾಂಗ್ರೆಸ್ ಅಭ್ಯರ್ಥಿಯಾಗಿ ಆರ್.ಎಂ. ಕುಬೇರಪ್ಪ ಎರಡು ಪ್ರತಿಗಳಲ್ಲಿ ನಾಮಪತ್ರ ಸಲ್ಲಿಸಿದರು. ಬಿಜೆಪಿ ಅಭ್ಯರ್ಥಿಯಾಗಿ ನಿಕಟಪೂರ್ವ ಎಂಎಲ್​ಸಿ ಎಸ್.ವಿ. ಸಂಕನೂರ, ಜೆಡಿಎಸ್ ಅಭ್ಯರ್ಥಿಯಾಗಿ ಶಿವಶಂಕರ ಕಲ್ಲೂರ, ಆಜಾದ್ ಮಜ್ದೂರ್ ಕಿಸಾನ್ ಪಾರ್ಟಿ ಅಭ್ಯರ್ಥಿಯಾಗಿ ಪ್ರಕಾಶ ಕಾಂಬಳೆ ನಾಮಪತ್ರ ಸಲ್ಲಿಸಿದರು.

ಸ್ವತಂತ್ರ ಅಭ್ಯರ್ಥಿಗಳಾಗಿ ಶಿವಕುಮಾರ್ ತಳವಾರ, ಬಸವರಾಜ ತೇರದಾಳ, ಚರಣರಾಜ್ ಕೆ.ಎ. ನಾಮಪತ್ರ ಸಲ್ಲಿಸಿದ್ದಾರೆ. ಅಭ್ಯರ್ಥಿಗಳ ಅರ್ಜಿಗಳನ್ನು ಸಹಾಯಕ ಚುನಾವಣಾಕಾರಿ ಹಾಗೂ ಧಾರವಾಡ ಜಿಲ್ಲಾಕಾರಿ ನಿತೇಶ ಪಾಟೀಲ ಅವರು ಸ್ವೀಕರಿಸಿದರು.

ನಾಮಪತ್ರ ಸಲ್ಲಿಸಲು ಗುರುವಾರ ಕೊನೆಯ ದಿನವಾಗಿದೆ. ಅ. 9ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. 12ರವರೆಗೆ ನಾಮಪತ್ರ ಹಿಂಪಡೆಯಲು ಅವಕಾಶವಿದ್ದು, 28ರಂದು ಮತದಾನ ಜರುಗಲಿದೆ.

ಪರಿಷತ್ ಕಣದಲ್ಲಿ ‘ಕುಬೇರ’

ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ಕುಬೇರಪ್ಪ ಕೈಯಲ್ಲಿ 5 ಲಕ್ಷ ರೂ., ಪತ್ನಿ ಅನಿತಾ ಅವರ ಬಳಿ 1 ಲಕ್ಷ ರೂ., ಮಗನ ಬಳಿ 50,000 ರೂ. ನಗದು ಇದೆ. ವಿವಿಧ ಬ್ಯಾಂಕ್ ಖಾತೆಗಳಲ್ಲಿ ಕುಬೇರಪ್ಪ ಹೆಸರಲ್ಲಿ 27.67 ಲಕ್ಷ ರೂ.ಗಳಿವೆ. ಮಹೀಂದ್ರ ಎಕ್ಸ್​ಯುವಿ-500 ಹಾಗೂ ಟಿಯುವಿ-300 ಮಾದರಿ ಎರಡು ಕಾರುಗಳಿವೆ. ಮಕ್ಕಳ ಬಳಿ 3 ದ್ವಿಚಕ್ರ ವಾಹನಗಳಿವೆ.

ಕುಬೇರಪ್ಪ ಬಳಿ 1.5 ಲಕ್ಷ ರೂ. ಮೌಲ್ಯದ 30 ಗ್ರಾಂ ಚಿನ್ನಾಭರಣ, ಪತ್ನಿ ಬಳಿ 44 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಮಗನ ಬಳಿ 5 ಲಕ್ಷ ರೂ. ಮೌಲ್ಯದ 100 ಗ್ರಾಂ, ಮಗಳ ಬಳಿ 10 ಲಕ್ಷ ರೂ. ಮೌಲ್ಯದ 200 ಗ್ರಾಂ ಚಿನ್ನಾಭರಣಗಳಿವೆ. ಇವೆಲ್ಲವುಗಳಿಂದ ಕುಬೇರಪ್ಪ ಹಾಗೂ ಅವರ ಕುಟುಂಬದವರ ಬಳಿ ಇರುವ ಚರಾಸ್ತಿ ಮೌಲ್ಯ 1.4 ಕೋಟಿ ರೂ.ಗಳು.

ಕುಬೇರಪ್ಪ 5.14 ಎಕರೆ ಕೃಷಿ ಜಮೀನು, 2616 ಚದರ ಅಡಿಯ ಮನೆ, 1 ಕೋಟಿ ರೂ. ಮೌಲ್ಯದ 4344 ಚದರ ಅಡಿಯ ವಾಣಿಜ್ಯ ಕಟ್ಟಡ ಹೊಂದಿದ್ದಾರೆ. ಪತ್ನಿ 60 ಲಕ್ಷ ರೂ. ಮೌಲ್ಯದ 5.17ಎಕರೆ ಜಮೀನು ಹೊಂದಿದ್ದಾರೆ. ಒಟ್ಟಾರೆ 1.95 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.

ಸಂಕನೂರ ಆಸ್ತಿ ವಿವರ

ಪಶ್ಚಿಮ ಪದವೀಧರ ಕ್ಷೇತ್ರವನ್ನು ಒಮ್ಮೆ ಪ್ರತಿನಿಧಿಸಿರುವ ಸಂಕನೂರ ಕೈಯಲ್ಲಿರುವ ನಗದು 50,000 ರೂ., ಎಸ್​ಬಿಐ ಗದಗ ಶಾಖೆಯಲ್ಲಿ 27,32,909 ರೂ. ಹೊಂದಿದ್ದಾರೆ. ಎಸ್​ಬಿಐ ಬೆಂಗಳೂರು ಶಾಖೆಯಲ್ಲಿ 1,62,124 ರೂ. ಹೊಂದಿದ್ದಾರೆ. ಗದಗ ಸಿಂಡಿಕೇಟ್ ಬ್ಯಾಂಕ್​ನಲ್ಲಿ 6,000 ರೂ., ಗದಗ ಕೆವಿಜಿ ಬ್ಯಾಂಕ್​ನಲ್ಲಿ 10,615 ರೂ., ನಿಡಗುಂದಿ ಕೆವಿಜಿ ಬ್ಯಾಂಕ್​ನಲ್ಲಿ 937 ರೂ. ಹೊಂದಿದ್ದಾರೆ. 16 ಲಕ್ಷ ರೂ. ಮೌಲ್ಯದ ಕಾರ್ ಹೊಂದಿದ್ದಾರೆ. 2 ಲಕ್ಷ ರೂ. ಮೌಲ್ಯದ ಚಿನ್ನಾಭರಣವಿದೆ.

ರೋಣ ತಾಲೂಕು ಸೂಡಿಯಲ್ಲಿ 30 ಲಕ್ಷ ರೂ. ಬೆಲೆಯ 13 ಎಕರೆ ಜಮೀನು ಅವರಿಗಿದೆ. ರೋಣ ತಾಲೂಕು ನಿಡಗುಂದಿಯಲ್ಲಿ 62 ಲಕ್ಷ ರೂ. ಮೌಲ್ಯದ 4250 ಚ. ಅಡಿ ವಿಸ್ತೀರ್ಣದ ವಸತಿ ಕಟ್ಟಡವಿದೆ.

ಸಂಕನೂರ ಅವರ ಒಟ್ಟು ಸ್ಥಿರಾಸ್ತಿ ಮೌಲ್ಯ 92 ಲಕ್ಷ ರೂ.ಗಳು.

ನಿಡಗುಂದಿ ಕೆವಿಜಿ ಬ್ಯಾಂಕ್ 10 ಲಕ್ಷ ರೂ. ಹಾಗೂ ಗದಗ ಎಸ್​ಬಿಐನಲ್ಲಿ 8.50 ಲಕ್ಷ ರೂ. ಸಾಲ ಹೊಂದಿದ್ದಾರೆ. ಅವರ ವಿರುದ್ಧ ಯಾವುದೇ ಅಪರಾಧ ಪ್ರಕರಣಗಳಿಲ್ಲ.

ಪತ್ನಿ ಶರಣಮ್ಮ 11 ಲಕ್ಷ ರೂ. ಮೌಲ್ಯದ ಚರಾಸ್ತಿ ಹೊಂದಿದ್ದು, ಅವರ ಕೈಯಲ್ಲಿರುವ ಹಣ ಕೇವಲ 5,000 ರೂ., ಗದಗ ಕೋಟಕ್ ಮಹೀಂದ್ರಾ ಬ್ಯಾಂಕ್​ನಲ್ಲಿ 3027 ರೂ. ಹೊಂದಿದ್ದಾರೆ. ಅಂಚೆ ಕಚೇರಿ ಉಳಿತಾಯ ಖಾತೆಯಲ್ಲಿ 9956 ರೂ. ಹೊಂದಿದ್ದಾರೆ. 10 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 1 ಲಕ್ಷ ರೂ. ಮೌಲ್ಯದ ಬೆಳ್ಳಿಯ ಆಭರಣ ಹೊಂದಿದ್ದಾರೆ. ಅವರ ಹೆಸರಲ್ಲಿ ಸ್ಥಿರಾಸ್ತಿ ಇಲ್ಲ. ಹಾಗೂ ಅವರು ಸಾಲ ಹೊಂದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net