ಉಭಯ ಸರ್ಕಾರದ ವಿರುದ್ಧ ಆಕ್ರೋಶ

oplus_2
oplus_2
Published on

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗೆ ವೇಗ ನೀಡುವಲ್ಲಿ ಕೇಂದ್ರ-ರಾಜ್ಯ ಸರ್ಕಾರಗಳು ಉದಾಸೀನ ಮನೋಭಾವ ಮುಂದುವರೆಸಿವೆ. ಆದ್ದರಿಂದ ಹೋರಾಟ ತೀವ್ರಗೊಳಿಸುವುದು ಅನಿವಾರ್ಯ ಎಂದು ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ತಿಳಿಸಿದರು.

ಮಂಗಳವಾರ ನಡೆದ ಸಮಿತಿ ಸಭೆಯಲ್ಲಿ ಮಾತನಾಡಿ, ಲೋಕಸಭಾ ಚುನಾವಣೆ ಎದುರಾದ ಹಿನ್ನಲೆಯಲ್ಲಿ ಹೋರಾಟದಿಂದ ಹಿಂದೆ ಸರಿಯಲಾಯಿತು. ಆದರೆ, ಚುನಾವಣೆ ಮುಗಿದ ಬಳಿಕ ಉಭಯ ಸರ್ಕಾರಗಳು ಈ ಬಗ್ಗೆ ಪ್ರಸ್ತಾಪಿಸುತ್ತಿಲ್ಲ. ಅನುದಾನ ಬಿಡುಗಡೆಗೂ ಮುಂದಾಗಿಲ್ಲ. ನಿರ್ಲಕ್ಷೃ ತೋರುತ್ತಿದೆ. ಹೀಗೆ ಆದಲ್ಲಿ ಯೋಜನೆ ಪೂರ್ಣಗೊಳ್ಳುವುದು ಯಾವಾಗ ಎಂದು ಆತಂಕ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ಘೋಷಿಸಿದ್ದ 5,300 ಕೋಟಿ ರೂ. ಅನುದಾನ ಬಿಡುಗಡೆಯಾಗಿಲ್ಲ. ಇನ್ನೂ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವಲ್ಲಿ ಕಾಲ ಕಳೆಯುತ್ತಿದೆ. ನಾವು ಗ್ಯಾರಂಟಿ ವಿರೋಧಿಗಳಲ್ಲ. ಆದರೆ, ನೀರಾವರಿ ಯೋಜನೆಗಳನ್ನು ಕಾಲಮಿತಿಯೊಳಗೆ ಮುಗಿಸುವುದು ಸರ್ಕಾರಗಳ ಕರ್ತವ್ಯ ಎಂದರು.

ಅಬ್ಬಿನಹೊಳಲು ಭೂ ಸ್ವಾಧೀನ ಪ್ರಕ್ರಿಯೆ ಸಮಸ್ಯೆ ಮುಗಿದಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಆದರೆ, ಕಾಲುವೆ ನಿರ್ಮಾಣದ ಕಾಮಗಾರಿ ಪೂರ್ಣಗೊಂಡಿರುವ ಕುರಿತು ಈವರೆಗೂ ಇಲಾಖೆಯಿಂದ ಸಮಜಾಯಿಷಿ ನೀಡಿಲ್ಲ. ವಾಸ್ತವತೆ ಬಹಿರಂಗ ಪಡಿಸದೆ, ಯೋಜನೆ ಮೂಲೆಗುಂಪು ಮಾಡುವ ಹುನ್ನಾರಗಳು ನಡೆಯುತ್ತಿವೆಯೇ ಎಂಬ ಅನುಮಾನ ಉಂಟಾಗಿದೆ ಎಂದು ಹೇಳಿದರು.

ನೂತನ ಸಂಸದ ಗೋವಿಂದ ಎಂ ಕಾರಜೋಳ ಅವರು ಈ ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದರು. ಅವರಿಗೆ ಈ ಯೋಜನೆಯ ಅರಿವಿದೆ. ಅಲ್ಲದೆ, ಕೇಂದ್ರದಲ್ಲಿ ನೂತನ ಸಚಿವರಾಗಿ ಮಧ್ಯ ಕರ್ನಾಟಕ ಪ್ರತಿನಿಧಿಸುತ್ತಿರುವ ವಿ.ಸೋಮಣ್ಣ ಅವರನ್ನು ಸಮಿತಿ ಸಂಪರ್ಕಿಸಲು ಮುಂದಾಗಿದೆ. 24ರಿಂದ ಲೋಕಸಭಾ ಅಧಿವೇಶನ ಆರಂಭವಾಗಲಿದೆ. ಅಷ್ಟರೊಳಗೆ ಸಚಿವರ ಭೇಟಿಯಾಗಿ ಅನುದಾನ ಬಿಡುಗಡೆಗೆ ಯತ್ನಿಸುವಂತೆ ಇಬ್ಬರ ಬಳಿಯೂ ಕೋರಲಾಗುವುದು ಎಂದು ತಿಳಿಸಿದರು.

ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಜಿಲ್ಲೆಯ 4 ತಾಲೂಕುಗಳಲ್ಲಿ ಈಗಾಗಲೇ ಬಂದ್ ಮಾಡಲಾಗಿದೆ. ಶೀಘ್ರ ಮೊಳಕಾಲ್ಮೂರು, ಹೊಸದುರ್ಗ ಬಂದ್‌ಗೆ ಕರೆ ನೀಡಲಾಗುವುದು ಎಂದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ, ಜಿಲ್ಲಾ ಕಾರ್ಯಾಧ್ಯಕ್ಷ ಕೆ.ಸಿ.ಹೊರಕೇರಪ್ಪ, ಉಪಾಧ್ಯಕ್ಷ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ತಾಲೂಕು ಅಧ್ಯಕ್ಷ ಹಂಪಯ್ಯನಮಾಳಿಗೆ ಧನಂಜಯ, ಮಹಿಳಾ ಘಟಕದ ಅಧ್ಯಕ್ಷೆ ದೊಡ್ಡ ಸಿದ್ದವ್ವನಹಳ್ಳಿ ಸುಧಾ, ನೀರಾವರಿ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಆರ್.ದಯಾನಂದ, ಸಂಚಾಲಕ ಚಿಕ್ಕಪ್ಪನಹಳ್ಳಿ ಷಣ್ಮುಖ, ಹುಣಸೆಕಟ್ಟೆ ಕಾಂತರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net