ಚನ್ನಪಟ್ಟಣ
ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಅತ್ಯಧಿಕ ಬಹುಮತ ಪಡೆಯುವ ಮೂಲಕ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಇತಿಹಾಸ ನಿರ್ಮಿಸಲಿದೆ ಎಂದು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ವಿಶ್ವಾಸ ವ್ಯಕ್ತಪಡಿಸಿದರು.
ನಗರದ 5ನೇ ಅಡ್ಡರಸ್ತೆಯಲ್ಲಿರುವ ಬಿಜೆಪಿ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಪಕ್ಷದ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿ, ನರೇಂದ್ರ ಮೋದಿ ಅವರ ದೃಢ ಹಾಗೂ ಜನಪರ ಆಡಳಿತ ದೇಶವಾಸಿಗಳ ಮನಗೆದ್ದಿದೆ. ರಾಜ್ಯದಲ್ಲೂ ಬಿಜೆಪಿ ಸರ್ಕಾರದ ಜನಪರ ಯೋಜನೆಗಳನ್ನು ಜನತೆ ಮೆಚ್ಚಿಕೊಂಡಿದ್ದಾರೆ. ಇಡೀ ರಾಜ್ಯದೊಂದಿಗೆ ಈ ಬಾರಿ ಹಳೇ ಮೈಸೂರು ಭಾಗದಲ್ಲೂ ಪಕ್ಷ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ. 150 ಸ್ಥಾನಗಳನ್ನು ಗೆಲುವ ಮೂಲಕ ಉತ್ತರ ಪ್ರದೇಶದಂತೆ ರಾಜ್ಯದಲ್ಲೂ ಲಿತಾಂಶ ಕಂಡುಬರಲಿದೆ ಎಂದರು.
ರಾಜ್ಯಕ್ಕೆ ಸಮರ್ಥ ನಾಯಕತ್ವ ಮತ್ತು ಅಭಿವೃದ್ಧಿ ಪರ ಆಡಳಿತಬೇಕು ಎಂಬ ಕಾರಣದಿಂದ ನಿಷ್ಕ್ರಿಯವಾಗಿದ್ದ ಜೆಡಿಎಸ್ & -ಕಾಂಗ್ರೆಸ್ ದೋಸ್ತಿ ಸರ್ಕಾರವನ್ನು ತೆಗೆದು, ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದೇವೆ. ಸರ್ಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದೆ. ಈ ಪಕ್ಷದ ಸದಸ್ಯರು ಎಂಬುದೇ ನಮಗೆ ಹೆಮ್ಮೆಯ ವಿಚಾರ ಎಂದು ತಿಳಿಸಿದರು.
ನಮ್ಮ ಪಕ್ಷದ ಮೂಲಬೇರು 1951ರಲ್ಲಿ ಸ್ಥಾಪನೆಯಾದ ಜನಸಂಘವಾಗಿದ್ದು, ದೇಶದ ರಾಜಕೀಯ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ ಹಿರಿಮೆ ಪಕ್ಷದ್ದಾಗಿದೆ. ಅತಿಹೆಚ್ಚು ಕಾರ್ಯಕರ್ತರನ್ನು ಹೊಂದಿರುವ ಏಕೈಕ ಪಕ್ಷ ನಮ್ಮದು. ಪಕ್ಷದ ವಿಚಾರಗಳನ್ನು ಮೆಚ್ಚಿ ದೇಶದ ಜನತೆ ಎರಡು ಬಾರಿ ಅಧಿಕಾರಕ್ಕೆ ತಂದಿದ್ದಾರೆ. ಹಿರಿಯರ ವಿಚಾರಗಳನ್ನು ಅಳವಡಿಸಿಕೊಂಡು, ನಾವೆಲ್ಲರೂ ಪಕ್ಷದ ಸಂಘಟನೆಯಲ್ಲಿ ತೊಡಗಬೇಕು ಎಂದು ಸಿಪಿವೈ ಕರೆ ನೀಡಿದರು.
ಮೋದಿ ಭಾಷಣ ಆಲಿಸಿದ ಯೋಗೇಶ್ವರ್: ಬಿಜೆಪಿ ಸಂಸ್ಥಾಪನಾ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದ ನೇರಪ್ರಸಾರವನ್ನು ಪಕ್ಷದ ಕಾರ್ಯಕರ್ತರ ಜತೆ ಯೋಗೇಶ್ವರ್ ವೀಸಿದರು. ಸಂಸ್ಥಾಪನಾ ದಿನದ ಅಂಗವಾಗಿ ಬಿಜೆಪಿ ಹಿರಿಯ ಮುಖಂಡ ಡಿ. ರಾಮಚಂದ್ರು ಅವರನ್ನು ಅವರ ನಿವಾಸದಲ್ಲಿ ಸನ್ಮಾನಿಸಲಾಯಿತು.
ಬಿಜೆಪಿ ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜು, ಬಮುಲ್ ಮಾಜಿ ನಿರ್ದೇಶಕ ಎಸ್. ಲಿಂಗೇಶ್ಕುಮಾರ್, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಆರ್.ಎಂ. ಮಲವೇಗೌಡ, ತಾಲೂಕು ಬಿಜೆಪಿ ಅಧ್ಯಕ್ಷ ಕೆ.ಟಿ. ಜಯರಾಮು, ನಗರ ಬಿಜೆಪಿ ಅಧ್ಯಕ್ಷ ಶಿವಕುಮಾರ್ ಹಲವರು ಉಪಸ್ಥಿತರಿದ್ದರು.