

ಶಿವಪ್ರಭು ಈಸರಗೊಂಡ ಉಪ್ಪಿನಬೆಟಗೇರಿ
ಜನ್ಮ ದಿನ ಆಚರಿಸಿಕೊಳ್ಳಲೆಂದು ಹುಂಡಿಯಲ್ಲಿ ಸಂಗ್ರಹಿಸಿಟ್ಟಿದ್ದ ಹಣವನ್ನು ಶ್ರೀರಾಮ ಮಂದಿರ ನಿರ್ವಣಕ್ಕೆ ನೀಡುವ ಮೂಲಕ ಇಬ್ಬರು ಮಕ್ಕಳು ಜನರ ಮೆಚ್ಚುಗೆಗೆ ಪಾತ್ರರಾದರು.
ಭಾನುವಾರ ಧಾರವಾಡ ತಾಲೂಕಿನ ಉಪ್ಪಿನಬೆಟಗೇರಿ ಗ್ರಾಮದಲ್ಲಿ ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಸಂಗ್ರಹ ಮಾಡುತ್ತಿರುವುದನ್ನು ಗಮನಿಸಿದ ಹದಿಮೂರು ವರ್ಷದ ಸುಶಾಂತ ಬೆಳವಂಕಿ ಹಾಗೂ ಆರು ವರ್ಷದ ಆದಿತ್ಯ ಈಸರಗೊಂಡ ಎಂಬ ಬಾಲಕರಿಬ್ಬರು ತಮ್ಮ ಮನೆಗೆ ತೆರಳಿ ಪಾಲಕರ ಒಪ್ಪಿಗೆ ಪಡೆದರು. ತಾವು ಕೂಡಿಟ್ಟ ಹಣವನ್ನು ಎಣಿಸದೆಯೇ ಹುಂಡಿಗಳನ್ನೇ (ಕುಡಿಕೆ) ನಿಧಿ ಸಂಗ್ರಹಕಾರರಿಗೆ ಒಪ್ಪಿಸಿದರು.
ಗ್ರಾಮದ ಮಾರ್ಕೆಟ್ ರಸ್ತೆಯಲ್ಲಿರುವ ಶ್ರೀ ದ್ಯಾಮವ್ವ ದುರ್ಗವ್ವ ದೇವಸ್ಥಾನದಲ್ಲಿ ಈ ಎರಡೂ ಹುಂಡಿಗಳನ್ನು ಸಂಘಟಕರು ಒಡೆದು ಹಣ ಎಣಿಕೆ ಮಾಡಿದರು. ಆಗ, ಸುಶಾಂತ ಬೆಳವಂಕಿ ಹುಂಡಿಯಲ್ಲಿ 2000 ರೂ. ಹಾಗೂ ಆದಿತ್ಯ ಈಸರಗೊಂಡ ಹುಂಡಿಯಲ್ಲಿ 500 ರೂ. ಇರುವುದು ಬೆಳಕಿಗೆ ಬಂದಿತು.
ಸಂಗನಗೌಡ ರಾಮನಗೌಡರ, ಗ್ರಾಪಂ ಮಾಜಿ ಅಧ್ಯಕ್ಷ ಮಹಾವೀರ ಅಷ್ಟಗಿ ಮಾತನಾಡಿದರು. ಈ ಸಂದರ್ಭದಲ್ಲಿ ಶಿವಪ್ಪ ವಿಜಾಪೂರ, ಶಿವಾನಂದ ದೇಶನೂರ, ಅವಿನಾಶ ಮಸೂತಿ, ರಮೇಶ ಓರಣಕರ, ರವೀಂದ್ರ ದೇಸಾಯಿ ಇದ್ದರು.