

ಚಾಮರಾಜನಗರ: ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವ ಉಪ್ಪಾರ ಸಮುದಾಯವನ್ನು ಮೀಸಲಾತಿ ಪಟ್ಟಿಯಲ್ಲಿ ಸೇರಿಸಬೇಕು ಎಂದು ಹೊಸದುರ್ಗ ಶ್ರೀಭಗೀರಥ ಪೀಠದ ಡಾ.ಪುರುಷೋತ್ತಮಾನಂದಪುರಿ ಸ್ವಾಮೀಜಿ ಆಗ್ರಹಿಸಿದರು.
ತಾಲೂಕಿನ ನಡುಕಲಮೋಳೆಯಲ್ಲಿ ಶ್ರೀಭಗೀರಥ ಮಹರ್ಷಿ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದ ಅವರು, ಮೀಸಲಾತಿ ವರದಿ ರಾಜ್ಯ ಸರ್ಕಾರದ ಮುಂದಿದ್ದು,ಉಪ್ಪಾರರ ಕುಲಶಾಸ್ತ್ರೀಯ ಅಧ್ಯಯನ ತಂಡದ ಮುಖ್ಯಸ್ಥ ಪ್ರೊ.ಕೆ.ಎಂ.ಮೇತ್ರಿ ಅವರು ರಾಜ್ಯಾದ್ಯಂತ ಪ್ರವಾಸ ಮಾಡಿ ಎಲ್ಲ ಜನರ ಅಂಕಿಅಂಶಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ. ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಮೂಲಕ ಸಮುದಾಯಕ್ಕೆ ಮೀಸಲಾತಿ ಸೌಲಭ್ಯ ಕೊಡಿಸುವ ಭರವಸೆ ನೀಡಿದ್ದಾರೆ ಎಂದರು.
ಉಪ್ಪಾರ ಸಮುದಾಯ ನಾಡಿಗೆ ತನ್ನದೆಯಾದ ಕೊಡುಗೆ ನೀಡಿದ್ದು, ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಅಲ್ಲದೇ ಎಲ್ಲ ಕ್ಷೇತ್ರಗಳಲ್ಲೂ ಹಿಂದುಳಿದಿದೆ. ಪ್ರವರ್ಗ1 ರಲ್ಲಿರುವ ಉಪ್ಪಾರ ಸಮಾಜವನ್ನು ಮೀಸಲಾತಿ ಪಟ್ಟಿಯಲ್ಲಿ ಸೇರಿಸುವ ಮೂಲಕ ಸಮಾಜದ ಅಭ್ಯುದಯಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಮಂಗಲ ಮಂಜುನಾಥಸ್ವಾಮೀಜಿ, ಜಿ.ಪಂ.ಮಾಜಿ ಅಧ್ಯಕ್ಷ ಸಿ.ಎ.ಮಹದೇವಶೆಟ್ಟಿ, ರಾಜು ವೈ.ಕೆ.ಮೋಳೆ, ಯಜಮಾನರಾದ ಮಾದಶೆಟ್ಟಿ, ನಾಗೇಂದ್ರ, ದೊಡ್ಡಮಾದಶೆಟ್ಟಿ, ಮಹದೇವಶೆಟ್ಟಿ ಸಮಾಜದ ಮುಖಂಡರು, ಗ್ರಾಮಸ್ಥರು ಭಾಗವಹಿಸಿದ್ದರು.