

ಮಂಡ್ಯ: ಮಂಡ್ಯ ತಾಲೂಕಿನ ಉಪ್ಪಾರಕನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘ ಜೆಡಿಎಸ್ ಮತ್ತು ಬಿಜೆಪಿ ಬೆಂಬಲಿತ ನಿರ್ದೇಶಕರು ಆಯ್ಕೆಯಾಗಿದ್ದಾರೆ. ಇದರೊಂದಿಗೆ ಮೈತ್ರಿ ಬಳಿಕ ಜಿಲ್ಲೆಯಲ್ಲಿ ನಡೆದ ಸ್ಥಳೀಯ ಚುನಾವಣೆಯಲ್ಲಿ ಬಹುಮತ ಪಡೆದಿದೆ.
10 ನಿರ್ದೇಶಕ ಬಲದ ಉಪ್ಪಾರಕನಹಳ್ಳಿ ಡೇರಿ ಆಡಳಿತ ಮಂಡಳಿಗೆ ಗುರುವಾರ ಚುನಾವಣೆ ನಡೆಯಿತು. ಕಾಂಗ್ರೆಸ್ ವಿರುದ್ಧ ಚುನಾವಣೆ ಎದುರಿಸಿದ ಬಿಜೆಪಿ, ಜೆಡಿಎಸ್ 8 ಸ್ಥಾನ ಗೆದ್ದುಕೊಂಡಿತು. ಮೈತ್ರಿ ಅಭ್ಯರ್ಥಿಯಾಗಿದ್ದ ಬಿಜೆಪಿಯ ಪುಷ್ಪವತಿ, ಲೋಕೇಶ್, ಜೆಡಿಎಸ್‌ನ ಶಶಿಕಲಾ, ಚೆನ್ನಮ್ಮ, ನಾಥೇಗೌಡ, ರುದ್ರೇಗೌಡ, ಲಕ್ಷ್ಮೀ, ಸಿದ್ದಗೌರಮ್ಮ ಆಯ್ಕೆಯಾದರು. ಅಂತೆಯೇ ಕಾಂಗ್ರೆಸ್‌ನ ರಮೇಶ್, ಪಕ್ಷೇತರ ಅಭ್ಯರ್ಥಿ ಪ್ರಭಾಕರ್ ಚುನಾಯಿತರಾದರು.
ಕಳೆದ ಆಡಳಿತ ಮಂಡಳಿ ಕಾಂಗ್ರೆಸ್ ತೆಕ್ಕೆಯಲ್ಲಿತ್ತು. ಆದರೀಗ ಮೈತ್ರಿಗೆ ಗೆಲುವು ಒಲಿದಿದ್ದು, ಅಧಿಕಾರ ಹಿಡಿಯುವುದು ಖಚಿತವಾಗಿದೆ. ಪೊಲೀಸ್ ಭದ್ರತೆ ನಡುವೆ ಚುನಾವಣೆ ನಡೆಯಿತು. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನವೂ ಎರಡು ಪಕ್ಷದ ನಡುವೆ ಹಂಚಿಕೆಯಾಗಲಿದೆ. ನೂತನ ನಿರ್ದೇಶಕರನ್ನು ಮುಖಂಡರಾದ ಯು.ಪಿ.ನಾಗರಾಜು, ಡಿ.ಸಿ.ಕೆಂಪೇಗೌಡ, ಶಿವಕುಮಾರ್ ಆರಾಧ್ಯ, ಶ್ರೀನಿವಾಸ್ ಇತರರು ಅಭಿನಂದಿಸಿದರು.