ಉಪ್ಪಳ್ಳಿ ರಸ್ತೆ ಅಗಲೀಕರಣಕ್ಕೆ ಗ್ರಾಮಸ್ಥರ ಒಪ್ಪಿಗೆ

9 ckm 1 web
Published on

ಚಿಕ್ಕಮಗಳೂರು: ನಗರದ ಮಲ್ಲಂದೂರು ರಸ್ತೆಯ ಉಪ್ಪಳ್ಳಿ ವೃತ್ತದಿಂದ ಹಸಿರು ಕನ್ವೆನ್ಷನ್ ಹಾಲ್​ವರೆಗೆ ರಸ್ತೆ ಅಗಲೀಕರಣ ಯೋಜನೆ ಅನುಷ್ಠಾನಕ್ಕೆ ಆ ಭಾಗದ ನಿವಾಸಿಗಳು ಒಪ್ಪಿದ್ದಾರೆ ಎಂದು ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಹೇಳಿದರು.

ನಗರಸಭಾ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಸಭೆಯಲ್ಲಿ ಉಪ್ಪಳ್ಳಿ ಗ್ರಾಮದ ನಿವಾಸಿಗಳ ಜತೆ ಚರ್ಚೆ ಮಾಡಿ ಒಟ್ಟು 70 ಅಡಿ ವಿಸ್ತರಣೆಗೆ ನಿವಾಸಿಗಳು ಒಪ್ಪಿಗೆ ಸೂಚಿಸಿದ್ದಾರೆ. ರಸ್ತೆ ಮಧ್ಯ ಭಾಗದಿಂದ ಎರಡೂ ಬದಿ ಲೋಕೋಪಯೋಗಿ ಇಲಾಖೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಜಂಟಿಯಾಗಿ ತಲಾ 35 ಅಡಿ ಫೆ.10ರಂದು ಗುರುತು ಮಾಡಿ ನಿವಾಸಿಗಳಿಗೆ ತಿಳಿಸಲಿದ್ದಾರೆ. ಗುರುತು ಮಾಡಿದ ದಿನದಿಂದ 15 ದಿನಗಳೊಳಗಾಗಿ ನಿವಾಸಿಗಳು ತೆರವು ಮಾಡಲು ಒಮ್ಮತದ ತೀರ್ವನಕ್ಕೆ ಬರುತ್ತೇವೆ ಎಂದು ತಿಳಿಸಿದ್ದಾರೆಂದರು.

ಉಪ್ಪಳ್ಳಿ ಯಗಚಿಹಳ್ಳದಿಂದ ಹಸಿರು ಕನ್ವೆನ್ಷನ್ ಹಾಲ್​ವರೆಗೆ ಅಭಿವೃದ್ಧಿ ಕಾರ್ಯ ಈಗಾಗಲೇ ಪ್ರಗತಿಯಲ್ಲಿದೆ. ಮುಂದಿನ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಲಾಗುತ್ತಿದೆ. ಅಲ್ಲಿನ ಮಾಲೀಕರು ಗುರುತು ಹಾಕಿದ ತಕ್ಷಣ ತೆರವು ಮಾಡಿ ಅಭಿವೃದ್ಧಿ ಕಾರ್ಯಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ನಗರಸಭೆ ಸದಸ್ಯ ಸದಸ್ಯರಾದ ಮುನೀರ್, ಖಲಂದರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆನಂದ್, ಪೌರಾಯುಕ್ತ ಬಿ.ಸಿ.ಬಸವರಾಜು, ಪ್ರಾಧಿಕಾರದ ಸಹಾಯಕ ಯೋಜನಾ ನಿರ್ದೇಶಕ ರಾಘವೇಂದ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net