

ನಂಜನಗೂಡು: ಶೋಷಿತ ಸಮುದಾಯವನ್ನು ಅವಮಾನಿಸಿರುವ ನಟ ಉಪೇಂದ್ರ ಅವರ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ದಸಂಸ ಜಿಲ್ಲಾ ಸಂಚಾಲಕ ಬನ್ನಹಳ್ಳಿ ಸೋಮಣ್ಣ ಒತ್ತಾಯಿಸಿದರು.
ಉಪೇಂದ್ರ ಅವರು ಒಂದು ಸಮುದಾಯಕ್ಕೆ ಘಾಸಿಯುಂಟು ಮಾಡುವಂತಹ ಪದ ಬಳಿಸಿದ್ದು, ಅದು ಅಕ್ಷಮ್ಯ ಅಪರಾಧವಾಗಿದೆ. ಯಾವುದೇ ವ್ಯಕ್ತಿ ಇಂತಹ ಪದ ಬಳಸಿದರೆ ಅಂತ ವ್ಯಕ್ತಿಯ ಮೇಲೆ ಪರಿಶಿಷ್ಟ ಜಾತಿ ಹಾಗೂ ವರ್ಗದ ದೌರ್ಜನ್ಯ ಕಾಯ್ದೆಯಡಿಯಲ್ಲಿ ದೂರು ದಾಖಲಿಸಿ ಅಂಥವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕಾನೂನು ಇದೆ. ಬೆಂಗಳೂರಿನ ಚೆನ್ನಮ್ಮ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಉಪೇಂದ್ರ ವಿರುದ್ಧ ದೂರು ದಾಖಲಾಗಿರುವ ಪ್ರಕರಣಕ್ಕೆ ನ್ಯಾಯಾಲಯವು ತಡೆ ನೀಡಿರುವುದು ಬಹುಸಂಖ್ಯಾತ ದಲಿತ ಸಮುದಾಯಕ್ಕೆ ನೋವುಂಟು ಮಾಡಿದೆ ಎಂದು ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಈ ಹಿಂದೆ ಇದ್ದ ಸರ್ಕಾರದ ಅವಧಿಯಲ್ಲಿ ನಟ ಚೇತನ್ ಅವರು ಒಂದು ಹೇಳಿಕೆಯನ್ನು ಟ್ವೀಟ್ ಮಾಡಿದಾಗ ಅಂದಿನ ಸರ್ಕಾರ ಕೋಮು ಸೌಹಾರ್ದತೆಗೆ ಧಕ್ಕೆ ತರುತ್ತದೆ ಎಂದು ಕೇವಲ ಹತ್ತು ನಿಮಿಷಗಳಲ್ಲಿ ಚೇತನ್ ಅವರನ್ನು ಬಂಧಿಸಿ ಜೈಲಿಗೆ ಅಟ್ಟಿತು. ಉಪೇಂದ್ರ ಅವರು ಹೇಳಿಕೆ ನೀಡಿ ಮೂರು ನಾಲ್ಕು ದಿನ ಕಳೆದರೂ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸದೇ ಇರುವುದು ರಾಜ್ಯ ಸರ್ಕಾರದ ವಿಳಂಬ ನೀತಿ ಎಂದು ಖಂಡಿಸಿದರು.
ಸರ್ಕಾರ ಕೂಡಲೇ ಉಪೇಂದ್ರ ಅವರನ್ನು ಬಂಧಿಸಿ ಜೈಲಿಗೆ ಕಳಿಸಬೇಕು. ಇಲ್ಲದಿದ್ದರೆ ಸರ್ಕಾರದ ವಿರುದ್ಧ ದಸಂಸದಿಂದ (ಅಂಬೇಡ್ಕರ್ ವಾದ) ಉಗ್ರ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇನ್ನು ಮುಂದೆ ಪರಿಶಿಷ್ಟ ಜಾತಿ ಮತ್ತು ವರ್ಗದವರು ಉಪೇಂದ್ರ ಅಭಿನಯದ ಎಲ್ಲ ಚಿತ್ರಗಳನ್ನು ಬಹಿಷ್ಕರಿಸಬೇಕು. ರಾಜ್ಯ ಸರ್ಕಾರ ಉಪೇಂದ್ರ ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಚಿತ್ರಮಂದಿರಗಳಲ್ಲಿ ಉಪೇಂದ್ರ ಸಿನಿಮಾಗಳನ್ನು ಪ್ರದರ್ಶನಗೊಳ್ಳುವ ಸಂದರ್ಭದಲ್ಲಿ ಘೇರಾವ್ ಮಾಡುವುದು ಹಾಗೂ ಪೋಸ್ಟರ್‌ಗಳ ಮೇಲೆ ಮಸಿ ಬಳಿಯುವುದು ಎಂಬ ನಿರ್ಣಯವನ್ನು ತೆಗೆದುಕೊಳ್ಳಲಾಯಿತು.
ಸಭೆಯಲ್ಲಿ ದಸಂಸ ಜಿಲ್ಲಾ ಸಂಚಾಲಕರಾದ ಮಲ್ಲಹಳ್ಳಿ ನಾರಾಯಣ್, ದೊಡ್ಡಸಿದ್ದು, ದೇವರಸನಹಳ್ಳಿ ಬಸವರಾಜು, ಎಚ್.ಡಿ.ಕೋಟೆ ಸಣ್ಣಕುಮಾರ್, ಜಿ.ಜಿ ಕಾಲೋನಿ ರವಿ, ಗೋರನಹಳ್ಳಿ ನಾರಾಯಣ, ಕೃಷ್ಣಮೂರ್ತಿ, ಸಣ್ಣಮಲ್ಲಪುರ ಮಹೇಶ್, ಹೊಳವಾಡಿ ಅರುಣ್ ಕುಮಾರ್, ಹಳೆಪುರ ಮಹಾದೇವಸ್ವಾಮಿ, ಕುಮಾರ್, ಸೋಮಣ್ಣ, ರವಿ ಹಾಜರಿದ್ದರು.