

ಮದ್ದೂರು: ತಾಲೂಕಿನ ಆತಗೂರು ಹೋಬಳಿಯ ಮಲ್ಲನಕುಪ್ಪೆ ಗ್ರಾಮ ಪಂಚಾಯಿತಿ ನೂತನ ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಮಲ್ಲನಾಯಕನಹಳ್ಳಿ ವಾಸುದೇವ ಅವಿರೋಧವಾಗಿ ಆಯ್ಕೆಯಾದರು.
ಟಿ.ಡಿ.ಪ್ರತಿಮಾ ಅವರು ರಾಜೀನಾಮೆ ನೀಡಿದ್ದ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ವಾಸುದೇವ ಅವರನ್ನು ಹೊರತುಪಡಿಸಿ ಬೇರ‌್ಯಾರು ನಾಮಪತ್ರ ಸಲ್ಲಿಸದ ಕಾರಣ ಚುನವಣಾಧಿಕಾರಿಯೂ ಆದ ಲೋಕೋಪಯೋಗಿ ಇಲಾಖೆಯ ಎಇಇ ದೇವಾನಂದ್ ಅವರು ವಾಸುದೇವ ಅವರ ಆಯ್ಕೆಯನ್ನು ಘೋಷಣೆ ಮಾಡಿದರು.
ಉಪಾಧ್ಯಕ್ಷ ವಾಸುದೇವ ಮಾತನಾಡಿ, ಶಾಸಕ ಕೆ.ಎಂ.ಉದಯ್ ಅವರ ಸಹಕಾರದಿಂದ ನಾನು ಉಪಾಧ್ಯಕ್ಷನಾಗಿ ಅವಿರೋಧವಾಗಿ ಆಯ್ಕೆಯಾಗಿದ್ದು, ಪಂಚಾಯಿತಿ ಎಲ್ಲ ಸದಸ್ಯರ ಸಹಕಾರದಿಂದ ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸುವ ಮೂಲಕ ಜನರಿಗೆ ಅನುಕೂಲ ಕಲ್ಪಿಸಲಾಗುವುದು ಎಂದರು.
ಸರ್ಕಾರದಿಂದ ಸಿಗುವ ಎಲ್ಲ ರೀತಿಯ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಹಾಗೂ ಪಂಚಾಯಿತಿಯ ಎಲ್ಲ ಸದಸ್ಯರ ವಿಶ್ವಾಸ ಪಡೆದು ಮಾದರಿ ಪಂಚಾಯಿತಿಯನ್ನಾಗಿ ಮಾಡಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದರು.
ಶಾಸಕ ಕೆ.ಎಂ.ಉದಯ್ ಅವರು ಶಾಸಕರಾದ ಎರಡೇ ವರ್ಷದಲ್ಲಿ ಸರ್ಕಾರದಿಂದ ಸುಮಾರು 1200 ಕೋಟಿ ರೂ. ಗೂ ಹೆಚ್ಚಿನ ಅನುದಾನ ತಂದು ತಾಲೂಕಿನಲ್ಲಿ ಅಭಿವೃದ್ಧಿಯ ಪರ್ವ ಪ್ರಾರಂಭ ಮಾಡಿದ್ದಾರೆ. ಆತಗೂರು ಹೋಬಳಿಯಲ್ಲೂ ಹೆಚ್ಚಿನ ಪ್ರಮಾಣದಲ್ಲಿ ನೀರಾವರಿ, ಶಿಕ್ಷಣ, ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ಇನ್ನಿತರ ಕ್ಷೇತ್ರಗಳಿಗೂ ಆತಗೂರು ಹೋಬಳಿ ಒಂದಕ್ಕೆ 200 ಕೋಟಿ ರೂ.ಗೂ ಅಧಿಕ ಅನುದಾನ ನೀಡಿರುವುದು ಪ್ರಶಂಸನೀಯ ಸಂಗತಿ ಎಂದು ಶಾಸಕ ಕೆ.ಎಂ.ಉದಯ್ ಅವರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ನೂತನ ಉಪಾಧ್ಯಕ್ಷ ವಾಸುದೇವ ಅವರನ್ನು ಪಂಚಾಯಿತಿ ಸದಸ್ಯರು ಹಾಗೂ ಮುಖಂಡರು ಅಭಿನಂದಿಸಿದರು. ಪಂಚಾಯಿತಿ ಅಧ್ಯಕ್ಷ ಗಿರಿಯಯ್ಯ, ಸದಸ್ಯರಾದ ಎಂ.ಎಂ.ರಾಧಮ್ಮ, ಸವಿತಾ, ಕೆ.ಆರ್.ಮಹೇಶ್, ರಂಜಿತಾ, ವೆಂಕಟಚಲಯ್ಯ, ಬಿ.ಕೆ.ಜಗದೀಶ್, ಇಂದ್ರಮ್ಮ, ಎಸ್.ಎಂ.ರಮ್ಯಾ, ಸಿ.ಪಿ.ರವಿ, ಪ್ರೇಮಕುಮಾರಿ, ಸುಜಾತಾ, ಪಿಡಿಒ ಮಹೇಶ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಧು, ಮುಖಂಡರಾದ ತಿಮ್ಮಯ್ಯ, ರವಿಕುಮಾರ್ ಸೇರಿದಂತೆ ಇತರರಿದ್ದರು.