

ಮೈಸೂರು: ವಿಶ್ವ ಉಪಶಮನ ಆರೈಕೆ ದಿನದ ಅಂಗವಾಗಿ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್, ವೈದ್ಯಕೀಯ ಕಾಲೇಜು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರೋಟರಿ ಉತ್ತರ ಮೈಸೂರು ಸಹಯೋಗದಲ್ಲಿ ನಗರದಲ್ಲಿ ಜಾಗೃತಿ ಜಾಥಾ ನಡೆಯಿತು.
ಉಪಶಮನ ಆರೈಕೆಯ ಮಹತ್ವವನ್ನು ತಿಳಿಸಲು ಆಯೋಜಿಸಿದ್ದ ಜಾಥಾಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಎಚ್.ಪ್ರಸಾದ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎಚ್.ಎನ್.ಮಹದೇವಪ್ರಸಾದ್, ರೋಟರಿ ಜಿಲ್ಲಾ ಗವರ್ನರ್ ಎನ್. ಪ್ರಕಾಶ್ ಕಾರಂತ್, ರೋಟರಿ ಮೈಸೂರು ಉತ್ತರ ಅಧ್ಯಕ್ಷ ಡಾ.ಎಸ್.ಎಚ್.ಜಗದೀಶ್ ಚಾಲನೆ ನೀಡಿದರು.
ಇ.ಡಿ. ಆಸ್ಪತ್ರೆ ಆವರಣದಿಂದ ಹೊರಟ ಜಾಥಾ ಲೋಕನಾಯಕ ನಗರ, ಬಸವನಗುಡಿ, ಹೆಬ್ಬಾಳ್, ಕುಂಬಾರಕೊಪ್ಪಲು ರಸ್ತೆಯ ಮೂಲಕ ಪಿಕೆಟಿಬಿ ಆಸ್ಪತ್ರೆಯ ಆವರಣದಲ್ಲಿರುವ ಕುವೆಂಪು ಸಭಾಂಗಣ ತಲುಪಿತು.
ಮೈಸೂರು ವೈದ್ಯಕೀಯ ಹಾಗೂ ಶುಶ್ರೂಷ ಕಾಲೇಜು, ರಾಮನ್ ಶುಶ್ರೂಷ ಶಾಲೆ ಮತ್ತು ಕಾಲೇಜು, ಗೀತ ಶಿಶು ಶಿಕ್ಷಣ ಸಂಸ್ಥೆಗಳು, ಪೂಜಾ ಭಾಗವತ್ ಮಹಾಜನ ಕಾಲೇಜು, ಶೇಷಾದ್ರಿಪುರಂ ಕಾಲೇಜು, ಸಂತ ಫಿಲೋಮಿನಾ ಕಾಲೇಜು, ಇ.ಡಿ. ಆಸ್ಪತ್ರೆ ಹಾಗೂ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಸಿಬ್ಬಂದಿ ಸೇರಿದಂತೆ 800ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.
ನಂತರ ವೇದಿಕೆ ಕಾರ್ಯಕ್ರಮಯಲ್ಲಿ ಮಾತನಾಡಿದ ಸರಗೂರಿನ ವಿವೇಕಾನಂದ ಸ್ಮಾರಕ ಆಸ್ಪತ್ರೆಯ ತಜ್ಞ ವೈದ್ಯ ಡಾ.ಎಂ.ಆರ್.ಸೀತಾರಾಮ್, ಉಪ ಶಮನ ಆರೈಕೆ ಪಡೆಯುತ್ತಿರುವ ರೋಗಿಗಳನ್ನು ಕಳೆದುಕೊಂಡವರ ಕುಟುಂಬಕ್ಕೆ ಸಾಂತ್ವನ ಹೇಳುವಲ್ಲಿ ಎಲ್ಲರೂ ಕೈಜೋಡಿಸುವುದು ಬಹಳ ಮುಖ್ಯ. ನೋವನ್ನು ಮಾತ್ರೆಯಿಂದ ಮಾತ್ರ ಶಮನ ಮಾಡಲು ಸಾಧ್ಯವಿಲ್ಲ. ನಾವು ವ್ಯಕ್ತಿಯನ್ನು ಹೇಗೆ ನಡೆಸಿಕೊಳ್ಳುತ್ತೇವೆ ಎನ್ನುವುದು ಮುಖ್ಯವಾಗುತ್ತದೆ ಎಂದರು.
ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕಿ ಡಾ.ರಾಜೇಶ್ವರಿ, ಪಿಕೆಟಿಬಿ ಮತ್ತು ಸಿಡಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಪ್ರಶಾಂತ್ ಇನ್ನಿತರರು ಪಾಲ್ಗೊಂಡಿದ್ದರು.