

ಕೊಳ್ಳೇಗಾಲ: ಪಟ್ಟಣದ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಡಿಸಿಎಫ್ ಕಚೇರಿ ಮುಂಭಾಗ ಬೂದಗಟ್ಟದೊಡ್ಡಿ ರೈತರು ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹವನ್ನು ಶನಿವಾರ ತಾತ್ಕಾಲಿಕವಾಗೊ ಕೈಬಿಟ್ಟರು.
ಕಳೆದ 20 ದಿನಗಳಿಂದ ಬೂದಗಟ್ಟದೊಡ್ಡಿಯ ರೈತರು ರಾಜ್ಯ ರೈತ ಸಂಘದ ನೇತೃತ್ವದಲ್ಲಿ ವಶಕ್ಕೆ ಪಡೆದ ಜಮೀನುಗಳನ್ನು ಬಿಡುವಂತೆ ಅರಣ್ಯಾಧಿಕಾರಿಗಳ ವಿರುದ್ಧ ಧರಣಿ ನಡೆಸುತ್ತಿದ್ದು 13 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು. ಈ ಹಿಂದೆ ಸ್ಥಳಕ್ಕೆ ಅರಣ್ಯ ಸಚಿವರು ಹಾಗೂ ಅರಣ್ಯ ಇಲಾಖೆಯ ಮೇಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಶೀಘ್ರದಲ್ಲೇ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುತ್ತದೆ ಎಂದು ಭರವಸೆ ನೀಡಿ ತೆರಳಿದ್ದರು. ಆದರೆ ರೈತರ ಧರಣಿ ಮುಂದುವರಿದಿತ್ತು.
ಶನಿವಾರ ಧರಣಿ ಸ್ಥಳಕ್ಕೆ ಶಾಸಕ ಆರ್.ನರೇಂದ್ರ ಹಾಗೂ ಉಪವಿಭಾಗಾಧಿಕಾರಿ ಗೀತಾ ಹುಡೇದ ಭೇಟಿ ನೀಡಿ ಅದಷ್ಟೂ ಬೇಗ ನಿಮ್ಮ ಸಮಸ್ಯೆ ಬಗೆಹರಿಸಲಾಗುತ್ತದೆ. ಆರೋಗ್ಯದ ದೃಷ್ಟಿಯಿಂದ ಉಪವಾಸ ಸತ್ಯಾಗ್ರಹವನ್ನು ಕೈಬಿಡುವಂತೆ ಮನವೊಲಿಸಿ ಎಳನೀರು ಕುಡಿಸುವ ಮೂಲಕ ಉಪವಾಸ ಸತ್ಯಾಗ್ರಹವನ್ನು ಕೈಬಿಟ್ಟಿದ್ದು, ಧರಣಿ ಮುಂದುವರಿಸಿದ್ದಾರೆ.
ರಾಜ್ಯ ರೈತ ಸಂಘದ ಉಪಾಧ್ಯಕ್ಷ ಮಹೇಶ್ ಪ್ರಭು, ರೈತ ಸಂಘದ ಜಿಲ್ಲಾಕಾರ್ಯಧ್ಯಕ್ಷ ಶ್ರೀಕಂಠಸ್ವಾಮಿ, ರೈತ ಮುಖಂಡ ಬಸವರಾಜು, ಚಾರ್ಲಿಸ್, ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಚೇತನ್ ದೊರೈರಾಜ್ ಮತ್ತಿತರಿದ್ದರು.