

ಕೊಳ್ಳೇಗಾಲ: ಪಟ್ಟಣದ ಬಸ್ ಟರ್ಮಿನಲ್ ಉದ್ಘಾಟನೆಗೆ ಒತ್ತಾಯಿಸಿ ನಗರಸಭೆಯ ಬಿಜೆಪಿ ಸದಸ್ಯರು ಮೂರು ದಿನಗಳಿಂದ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹವನ್ನು ಬುಧವಾರ ಕೈಬಿಟ್ಟರು.
ಉಪವಿಭಾಗಾಧಿಕಾರಿ ಗೀತಾ ಹುಡೇದ್ ಪ್ರತಿಭಟನಾ ಸ್ಥಳಕ್ಕೆ ತೆರಳಿ ಧರಣಿ ನಿರತ ಸದಸ್ಯರಾದ ಮಧುಚಂದ್ರ, ಕವಿತಾ ಹಾಗೂ ಮುಖಂಡ ರಮೇಶ್ ಅವರ ಮನವೊಲಿಸಿ ತಂಪು ಪಾನೀಯ ಕುಡಿಸುವ ಮೂಲಕ ಸತ್ಯಾಗ್ರಹಕ್ಕೆ ತೆರೆ ಎಳೆದರು.
ಮಹಿಳಾ ದಿನಾಚರಣೆ ಇರುವುದರಿಂದ ಸತ್ಯಾಗ್ರಹ ಮಾಡುವುದು ಸೂಕ್ತವಲ್ಲ. ನಿಮ್ಮ ಬೇಡಿಕೆ ಏನೇ ಇದ್ದರೂ ಜಿಲ್ಲಾಧಿಕಾರಿ ಜತೆ ಚರ್ಚಿಸಿ ಬಗೆಹರಿಸಿಕೊಳ್ಳಿ. ಈ ಬಗ್ಗೆ ಅವರಿಗೆ ವರದಿ ಸಲ್ಲಿಸಿದ್ದೇನೆ ಎಂದು ಎಸಿ ಗೀತಾ ಹುಡೇದ ಮನವಿ ಮಾಡಿದ ಮೇರೆಗೆ ಸದಸ್ಯರು ಸತ್ಯಾಗ್ರಹ ಅಂತ್ಯಗೊಳಿಸಿದರು.
ನಗರಸಭೆ ಸದಸ್ಯ ಶಾಂತರಾಜು ಮುಡಿಗುಂಡ, ಪ್ರಶಾಂತ್, ರಾಘವೇಂದ್ರ, ಪ್ರಕಾಶ್, ನಗರಸಭೆ ಮಾಜಿ ಅಧ್ಯಕ್ಷ ರಮೇಶ್, ಮುಖಂಡ ಜಗದೀಶ್ ಶಂಕನಪುರ ಇತರರು ಇದ್ದರು.