

ಚಾಮರಾಜನಗರ: ರಾಜ್ಯದಲ್ಲಿ ಪ್ರಾರಂಭವಾಗಲಿರುವ ಜಾತಿಗಣತಿ ಸಮೀಕ್ಷೆಯಲ್ಲಿ ವಿಪ್ರ ಸಮುದಾಯದವರು ಯಾವುದೇ ಉಪಪಂಗಡಗಳನ್ನು ಪರಿಗಣಿಸದೇ ಜಾತಿ ಕಾಲಂನಲ್ಲಿ ಬ್ರಾಹ್ಮಣ ಎಂದು ನಮೂದಿಸಿ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾಧ್ಯಕ್ಷ ಜಿ.ಎಂ.ಹೆಗ್ಗಡೆ ಮನವಿ ಮಾಡಿದರು.
ಜಿಲ್ಲೆಯಲ್ಲಿ ಬ್ರಾಹ್ಮಣ ಸಮುದಾಯದವರು ಸುಮಾರು 9-10 ಸಾವಿರ ಜನಸಂಖ್ಯೆ ಇದ್ದು, ಸುಮಾರು 65 ಕ್ಕೂ ಹೆಚ್ಚು ಉಪಪಂಗಡಗಳು ಇದೆ. ಅವರೆಲ್ಲರೂ ಯಾವುದೇ ಕಾರಣಕ್ಕೂ ಉಪಪಂಗಡಗಳ ಹೆಸರನ್ನು ನಮೂದು ಮಾಡಬಾರದು. ಜಾತಿ ಕಾಲಂನಲ್ಲಿ ಬ್ರಾಹ್ಮಣ ಹಾಗೂ ಧರ್ಮದ ಕಾಲಂನಲ್ಲಿ ಹಿಂದೂ ಎಂದು ಬರೆಸಬೇಕು. ಈ ಮೂಲಕ ಸಮೀಕ್ಷೆ ವೇಳೆಯಲ್ಲಿ ಸೂಕ್ತ ಮಾಹಿತಿಯನ್ನು ನೀಡಬೇಕು ಎಂದು ಶುಕ್ರವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷ ಬಾಲಸುಬ್ರಹ್ಮಣ್ಯ ಮಾತನಾಡಿ, ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಆಯೋಗದ ಮೂಲಕ ನಡೆಸುತ್ತಿರುವ ಸಮೀಕ್ಷೆ ಅವೈಜ್ಞಾನಿಕವಾಗಿದ್ದು, ಸಾಕಷ್ಟು ಗೊಂದಲವನ್ನು ಉಂಟುಮಾಡಿದೆ. ಹಿಂದೂ ಧರ್ಮದ ಸುಮಾರು 131 ಜಾತಿಗಳನ್ನು ವಿಶೇಷವಾಗಿ ಕ್ರೈಸ್ತ ಧರ್ಮಕ್ಕೆ ಸೇರಿಸುವ ಹುನ್ನಾರ ಮಾಡಲಾಗಿದ್ದು, ಇದು ಅತ್ಯಂತ ಖಂಡನೀಯ ಎಂದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಕ್ರೈಸ್ತ ಬ್ರಾಹ್ಮಣ ಮತ್ತು ಮುಸಲ್ಮಾನ ಬ್ರಾಹ್ಮಣ ಎಂಬ ಕಾಲಂಗಳನ್ನು ಮಾಡಿದ್ದು, ಇವುಗಳನ್ನು ಕೂಡಲೇ ಕೈಬಿಡಬೇಕು. ರಾಜ್ಯಸರ್ಕಾರ ಜಾತಿಗಣತಿ ವಿಚಾರದಲ್ಲಿ ಹೈಕಮಾಂಡ್ ಓಲೈಕೆ ಮಾಡುವುದನ್ನು ನಿಲ್ಲಿಸಬೇಕು. ಬ್ರಾಹ್ಮಣ ಸಮುದಾಯದವರು ಯಾವುದೇ ಗೊಂದಲಕ್ಕೆ ಒಳಗಾಗದೇ ಸಮೀಕ್ಷೆಯಲ್ಲಿ ಭಾಗವಹಿಸಿ ಜಾತಿ ಕಾಲಂನಲ್ಲಿ ಬ್ರಾಹ್ಮಣ ಎಂದು ನಮೂದಿಸಬೇಕು ಎಂದರು.
ಗೋಷ್ಠಿಯಲ್ಲಿ ಮಹಾಸಭಾ ರಾಜ್ಯ ಸಹಕಾರ್ಯದರ್ಶಿ ಸತೀಶ್ ಕುಮಾರ್, ಜಿಲ್ಲಾ ಕಾರ್ಯದರ್ಶಿ ಎಂ.ಎಸ್.ಚಂದ್ರಶೇಖರ್, ರಾಮಮಂದಿರ ಅಧ್ಯಕ್ಷ ಪ್ರತಾಪ್ ಕುಮಾರ್, ಲಕ್ಷ್ಮೀ ನರಸಿಂಹ ಹಾಜರಿದ್ದರು.