

ನಾಗಮಂಗಲ: ತರಗತಿಗೆ ಸರಿಯಾಗಿ ಹಾಜರಾಗುತ್ತಿಲ್ಲವೆಂದು ಪಾಲಕರಿಗೆ ಮಾಹಿತಿ ನೀಡಿದ್ದರಿಂದ ಆಕ್ರೋಶಗೊಂಡ ವಿದ್ಯಾರ್ಥಿಯೊಬ್ಬ ಉಪನ್ಯಾಸಕನಿಗೆ ಲಾಂಗ್ ತೋರಿಸಿ ಬೆದರಿಕೆ ಹಾಕಿರುವ ಪ್ರಕರಣ ಬಿ.ಜಿ.ನಗರದ ಖಾಸಗಿ ಡಿಪ್ಲೊಮಾ ಕಾಲೇಜಿನಲ್ಲಿ ನಡೆದಿದೆ.
ಯಡಿಯೂರು ಹೋಬಳಿ ಅವರೇಗೆರೆ ಗ್ರಾಮದ ಉದಯ್‌ಗೌಡ (17) ಎಂಬ ಪ್ರಥಮ ವರ್ಷದ ಡಿಪ್ಲೊಮಾ ವಿದ್ಯಾರ್ಥಿ ಉಪನ್ಯಾಸಕ ಚಂದನ್ ಎಂಬುವರಿಗೆ ಲಾಂಗ್ ತೋರಿಸಿ ಬೆದರಿಕೆ ಹಾಕಿದ್ದಾನೆ.
ಉದಯ್‌ಗೌಡ ತರಗತಿಗೆ ಸರಿಯಾಗಿ ಬರುತ್ತಿಲ್ಲ. ಆತನ ವರ್ತನೆಯೂ ಸರಿಯಿಲ್ಲ. ಪಾಠವನ್ನು ಸಮರ್ಪಕವಾಗಿ ಕೇಳುತ್ತಿಲ್ಲ. ಆತನಿಗೆ ಬುದ್ಧಿ ಮಾತು ಹೇಳಿ ಎಂದು ಪಾಲಕರಿಗೆ ಉಪನ್ಯಾಸಕ ಚಂದನ್ ಫೋನ್ ಮಾಡಿ ಹೇಳಿದ್ದರು. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿ, ಮರು ದಿನ ಬೈಕ್‌ನಲ್ಲಿ ಲಾಂಗ್ ತಂದು ತರಗತಿಗೆ ಮಾಸ್ಕ್ ಧರಿಸಿಕೊಂಡು ಆಗಮಿಸಿ, ‘ನನ್ನ ವಿಚಾರಕ್ಕೆ ಬಂದರೆ ತಕ್ಕ ಶಾಸ್ತಿ ಮಾಡುವೆ’ ಎಂದು ಬೆದರಿಕೆ ಹಾಕಿದ್ದಾನೆ. ತಕ್ಷಣವೇ ಸಹ ಉಪನ್ಯಾಸಕರು ಬೆಳ್ಳೂರು ಠಾಣೆಗೆ ದೂರವಾಣಿ ಮೂಲಕ ವಿಚಾರ ತಿಳಿಸಿದ್ದಾರೆ. ಪೊಲೀಸರು ವಿದ್ಯಾರ್ಥಿಯನ್ನು ವಶಕ್ಕೆ ಪಡೆದು ಲಾಂಗ್ ಮತ್ತು ಬೈಕ್ ಅನ್ನು ಜಪ್ತಿ ಮಾಡಿ ಪಾಲಕರನ್ನು ಕರೆಸಿ ಬುದ್ಧಿ ಮಾತು ಹೇಳಿ ಕಳುಹಿಸಿದರು. ಇತ್ತೀಚೆಗೆ ಈ ಪ್ರಕರಣ ಜರುಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.