

ಹಾಸನ: ಬಿಜೆಪಿಯ ಸರ್ಕಾರದ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿರುವುದರಿಂದ ಶಿರಾ ಹಾಗೂ ರಾಜರಾಜೇಶ್ವರಿ ನಗರ ಉಪಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸುವುದು ಖಚಿತ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಭರವಸೆ ವ್ಯಕ್ತಪಡಿಸಿದರು.
ಶಿರಾ ಹಾಗೂ ರಾಜರಾಜೇಶ್ವರಿನಗರಗಳ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿವಿಧ ಕಾಮಗಾರಿಗಳಿಗೆ 830 ಕೋಟಿ ರೂ.ಗೂ ಹೆಚ್ಚಿನ ಅನುದಾನ ನೀಡಿದ್ದಾರೆ. ಈ ಕಾರಣಕ್ಕಾಗಿ ಅಲ್ಲಿನ ಜನರು ನಮ್ಮ ಪಕ್ಷಕ್ಕೆ ವಿಶ್ವಾಸ ವ್ಯಕ್ತಪಡಿಸಲಿದ್ದಾರೆ ಎಂದು ಭಾನುವಾರ ಸುದ್ದಿಗಾರರಿಗೆ ಹೇಳಿದರು.
ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯಾಗುವುದಿಲ್ಲ. ಇನ್ನೂ ಮೂರು ವರ್ಷ ಬಿ.ಎಸ್.ಯಡಿಯೂರಪ್ಪ ಅವರೇ ಸಿಎಂ ಆಗಿ ಮುಂದುವರಿಯುತ್ತಾರೆ. ಬದಲಾವಣೆ ಪ್ರಶ್ನೆಯೇ ಉದ್ಭವಿಸುವುದಿಲ್ಲ. ರಾಜ್ಯ ಎರಡೂ ಉಪ ಚುನಾವಣೆಗಳೂ ಸಿಎಂ ನಾಯಕತ್ವದಲ್ಲಿಯೇ ನಡೆಯುತ್ತಿವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಹಾಸನ- ಮಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ 75ರ ದುರಸ್ತಿ ಕಾರ್ಯಕ್ಕೆ ಭಾನುವಾರ ಬೆಳಗ್ಗೆಯೇ ಚಾಲನೆ ನೀಡಲಾಗಿದೆ. ರಸ್ತೆ ದುಸ್ಥಿತಿಯಿಂದ ಜನರು ಕಷ್ಟ ಅನುಭವಿಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಹಳೆ ರಸ್ತೆ ಮರು ಡಾಂಬರೀಕರಣ ಮಾಡಲು ಸೂಚಿಸಲಾಗಿದೆ ಎಂದರು.
ಸಕಲೇಶಪುರ ಹಾಗೂ ಆಲೂರು ತಾಲೂಕುಗಳಲ್ಲಿ ಕಾಫಿ ಬೆಳೆ ಮತ್ತು ಉಳಿದೆಡೆ ಮೆಕ್ಕೆ ಜೋಳ ಮಳೆ ಆರ್ಭಟಕ್ಕೆ ಸಿಲುಕಿ ನಷ್ಟವಾಗಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಆನ್‌ಲೈನ್ ಮೂಲಕ ನಷ್ಟದ ಪರಿಹಾರಕ್ಕೆ ಅರ್ಜಿ ಸಲ್ಲಿಸಲು ಸೂಚಿಸಿದ್ದೇನೆ ಎಂದರು.
ಈ ವರ್ಷ ಕೋವಿಡ್ ಹಿನ್ನೆಲೆಯಲ್ಲಿ ಹಾಸನಾಂಬೆ ಉತ್ಸವ ಸರಳವಾಗಿ ನಡೆಯಲಿದೆ. ಎಲ್ಲ ಭಕ್ತರೂ ಸರಳ ಆಚರಣೆಗೆ ಸಹಕಾರ ನೀಡಬೇಕು. ಕನ್ನಡದ ಮೊದಲ ಶಿಲಾ ಶಾಸನ ಪತ್ತೆಯಾದ ಹಲ್ಮಿಡಿಗೆ ಮೂಲಸೌಕರ್ಯ ಕೊರತೆ ಬಗ್ಗೆ ಮಾಹಿತಿ ಇದೆ. ಶೀಘ್ರವೇ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದರು.