ಉಪ ಸಮರಕ್ಕೆ ಜೆಡಿಎಸ್ ಸ್ಪರ್ಧೆ ಖಚಿತ

JDS-party-symbol
Published on

ಮಾರ್ಥಂಡ ಜೋಶಿ ಬಸವಕಲ್ಯಾಣ

ಕ್ಷೇತ್ರದಲ್ಲಿ ನಡೆಯಲಿರುವ ಉಪ ಚುನಾವಣೆ ಕಣಕ್ಕಿಳಿಯಲು ಈ ಮೊದಲು ಹಿಂದೇಟು ಹಾಕಿದ್ದ ಜೆಡಿಎಸ್ ಭಾನುವಾರ ತನ್ನ ನಿಲುವು ಬದಲಿಸಿದೆ. ತನ್ನ ಅಭ್ಯರ್ಥಿಯನ್ನು ಅಖಾಡಕ್ಕೆ ಇಳಿಸುವ ನಿರ್ಧಾರ ಪ್ರಕಟಿಸಿರುವುದು ಪಕ್ಷದ ಕಾರ್ಯಕರ್ತರಲ್ಲಿ ಸಂಚಲನ ಜತೆಗೆ ಹೊಸ ಹುಮ್ಮಸ್ಸು ಮೂಡಿಸಿದೆ.

ಶಾಸಕ ಬಿ.ನಾರಾಯಣರಾವ ಅಗಲಿಕೆಯಿಂದಾಗಿ ತೆರವಾಗಿರುವ ಸ್ಥಾನಕ್ಕೆ ಉಪ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಮೂರು ತಿಂಗಳಿಂದ ರಾಜಕೀಯ ಚಟುವಟಿಕೆ ಚುರುಕುಗೊಂಡಿವೆ. ಬಿಜೆಪಿ-ಕಾಂಗ್ರೆಸ್ ನಲ್ಲಿ ಟಿಕೆಟ್ ಗಾಗಿ ಭಾರಿ ಪೈಪೋಟಿ ನಡೆಯುತ್ತಿದೆ. ಆದರೆ ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಸುವುದಿಲ್ಲ ಎಂದು ಹೇಳಿದ್ದು ಕಾರ್ಯಕರ್ತರಲ್ಲಿ ನಿರಾಸೆಗೆ ಕಾರಣವಾಗುವ ಜತೆಗೆ ಪಕ್ಷದ ವಲಯದಲ್ಲಿ ಮಂಕು ಕವಿದಿತ್ತು.

ಆಡಳಿತರೂಢ ಬಿಜೆಪಿ ಉಪ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿ ತಂತ್ರ-ಪ್ರತಿತಂತ್ರ ಹೆಣೆಯುತ್ತಿದ್ದರೆ, ಕಾಂಗ್ರೆಸ್ ಕ್ಷೇತ್ರವನ್ನು ಉಳಿಸಿಕೊಳ್ಳುವುದು ಸವಾಲಾಗಿ ಸ್ವೀಕರಿಸಿದೆ. ಈಗಾಗಲೇ ಎರಡೂ ಪಕ್ಷದ ಅಧ್ಯಕ್ಷರು ಕ್ಷೇತ್ರಕ್ಕೆ ಭೇಟಿ ನೀಡಿ ಕಾರ್ಯಕರ್ತರಲ್ಲಿ ಜೋಷ್ ತುಂಬಿದ್ದಾರೆ. ಆದರೆ ಹಿಂದೆ ಜನತಾ ಪರಿವಾರಕ್ಕೆ ಭದ್ರ ನೆಲೆ ಕಲ್ಪಿಸಿದ ಕ್ಷೇತ್ರದ ಉಪ ಸಮರದಲ್ಲಿ ಜೆಡಿಎಸ್ ನಿಂದ ಅಭ್ಯರ್ಥಿ ಕಣಕ್ಕಿಳಿಸುವುದು ವ್ಯರ್ಥ ಎನ್ನುವಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಈ ಹಿಂದೆ ನೀಡಿದ್ದ ಹೇಳಿಕೆ ಕಾರ್ಯಕರ್ತರಲ್ಲಿ ತಳಮಳಕ್ಕೆ ಕಾರಣವಾಗಿತ್ತು.

ಪಕ್ಷದ ಸ್ಥಳೀಯ ಕೆಲ ಪ್ರಮುಖರ ನಿಯೋಗ ಬೆಂಗಳೂರಿಗೆ ತೆರಳಿ ಅಭ್ಯರ್ಥಿ ಕಣಕ್ಕಿಳಿಸುವಂತೆ ಮನವಿ ಮಾಡಿತ್ತು. ಬಳಿಕ ಜಿಲ್ಲೆಯ ಪ್ರಮುಖರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಕುಮಾರಸ್ವಾಮಿ ಭರವಸೆ ನೀಡಿದ್ದರು. ಈ ಮಧ್ಯೆ ಉಪ ಚುನಾವಣೆಗೆ ಜೆಡಿಎಸ್ ಸ್ಪರ್ಧಿಸದಿರುವ ಕುರಿತು ಇತ್ತೀಚೆಗೆ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ನೀಡಿದ ಹೇಳಿಕೆ ಕಾರ್ಯಕರ್ತರಲ್ಲಿ ಮತ್ತೆ ಗೊಂದಲ ಮೂಡಿಸಿತ್ತು.

ಬಸವಕಲ್ಯಾಣ, ಮಸ್ಕಿ ಮತ್ತು ಸಿಂದಗಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ ಪ್ರಕಟಿಸುವ ಮೂಲಕ ಇದುವರೆಗಿನ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ಜನತಾ ಪರಿವಾರಕ್ಕೆ ಗಟ್ಟಿ ನೆಲೆ ಕಲ್ಪಿಸಿದ್ದ ಕ್ಷೇತ್ರ
1983ರಿಂದ ಇದುವರೆಗೆ ನಡೆದ ಬಸವಕಲ್ಯಾಣ ಕ್ಷೇತ್ರದ ಚುನಾವಣೆಯಲ್ಲಿ ಎರಡು ಸಲ ಹೊರತುಪಡಿಸಿ ಉಳಿದ ಎಲ್ಲ ಎಲೆಕ್ಷನ್ ಗಳಲ್ಲಿ ಜನತಾ ಪರಿವಾರದ ಅಭ್ಯರ್ಥಿಗಳೇ ಪ್ರತಿನಿಧಿಸಿದ್ದಾರೆ. ಹೀಗಾಗಿ ಕ್ಷೇತ್ರ ಜನತಾ ಪರಿವಾರದ ಭದ್ರಕೋಟೆಯಂದೇ ಗುರುತಿಸಿಕೊಂಡಿತ್ತು. 1983ರಲ್ಲಿ ಜನತಾ ಪಕ್ಷದಿಂದ ಆಯ್ಕೆಯಾಗಿದ್ದ ಬಸವರಾಜ ಪಾಟೀಲ್ ಅಟ್ಟೂರ್ ನಿರಂತರ ನಾಲ್ಕು ಸಲ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು. ಮೂರು ಸಲ ಕಾಂಗ್ರೆಸ್ ನಿಂದ ಪರಾಭವಗೊಂಡ ನಂತರ 1999ರಲ್ಲಿ ಎಂ.ಜಿ. ಮುಳೆ ಆಯ್ಕೆಯಾಗಿದ್ದು ಸಹ ಜೆಡಿಎಸ್ ನಿಂಏ. ಇನ್ನು 2004, 2013ರಲ್ಲಿ ಮಲ್ಲಿಕಾರ್ಜುನ ಖೂಬಾ ಜೆಡಿಎಸ್ ನಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. 2008ರ ಚುನಾವಣೆಯಲ್ಲಿ ಬಿಜೆಪಿಯಿಂದ ಅಟ್ಟೂರ್ ಆಯ್ಕೆಯಾಗಿದ್ದರು. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಬಿ.ನಾರಾಯಣರಾವ್ ಆಯ್ಕೆಯಾಗಿ ಕಾಂಗ್ರೆಸ್‌ಗೆ ನಾಲ್ಕು ದಶಕದ ನಂತರ ಭದ್ರ ನೆಲೆ ಕಲ್ಪಿಸಿದ್ದರು.

ಉಪ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಸಲು ಪಕ್ಷ ನಿರ್ಧರಿಸಿದೆ. ಕ್ಷೇತ್ರದಲ್ಲಿ ಜೆಡಿಎಸ್ ಗೆ ಭದ್ರವಾದ ನೆಲೆ ಇದೆ. ಪಕ್ಷದ ದೊಡ್ಡ ಕಾರ್ಯಕರ್ತರ ಪಡೆ ಇದೆ. ಉಪ ಚುನಾವಣೆಗೆ ಟಿಕೆಟ್ ಬಯಸಿ 9 ಪ್ರಮುಖರು ಅರ್ಜಿ ಸಲ್ಲಿಸಿದ್ದಾರೆ. ವರಿಷ್ಠರು ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದ್ದಾರೆ.| ಕೇಶಪ್ಪ ಬಿರಾದಾರಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net