ಉಪ ಲೋಕಾಯುಕ್ತ ವಿಚಾರಣೆಯಲ್ಲಿ ಸುಳ್ಳು ಹೇಳಿ ಪೇಚಿಗೆ ಸಿಲುಕಿದ ಅಧಿಕಾರಿ..!

mysore
Published on

ಮೈಸೂರು: ರಸ್ತೆ ಒತ್ತುವರಿ ತೆರವು ಕೆಲಸವನ್ನು ಅರೆಬರೆ ಮಾಡಿರುವ ಅಧಿಕಾರಿಯು ‘ಪೂರ್ಣ ತೆರವು ಮಾಡಲಾಗಿದೆ’ ಎಂದು ಸುಳ್ಳು ಹೇಳಿ, ಕೊನೆಗೆ ತಾನೇ ಫೋಟೋ ತೋರಿಸಿ ಸಿಕ್ಕಿ ಹಾಕಿಕೊಂಡರು...!

ಕರ್ನಾಟಕ ಉಪ ಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ದೂರುಗಳ ವಿಚಾರಣಾ ಸಭೆಯಲ್ಲಿ ಇಂತಹದೊಂದು ಸ್ವಾರಸ್ಯಕರ ಘಟನೆ ನಡೆಯಿತು.

ದೂರದಾರ ತಿ.ನರಸೀಪುರ ತಾಲೂಕಿನ ವೀರಭದ್ರಸ್ವಾಮಿ ಅವರು, ‘ರಸ್ತೆಯನ್ನು ಒತ್ತುವರಿ ಮಾಡಿ ಮನೆ ನಿರ್ಮಿಸಿಕೊಳ್ಳಲಾಗಿದೆ. ಇದನ್ನು ಅಧಿಕಾರಿಗಳು ಇನ್ನೂ ತೆರವುಗೊಳಿಸಿಲ್ಲ’ ಎಂದು ದೂರಿದರು.

ಇದಕ್ಕೆ ಸಮಜಾಯಿಷಿ ನೀಡಿದ ಅಧಿಕಾರಿ, ಒತ್ತುವರಿ ತೆರವು ಮಾಡಲಾಗಿದೆ ಎಂದು ಉತ್ತರಿಸಿದರು. ಇದಕ್ಕೆ ಪ್ರತಿಯಾಗಿ, ಅಧಿಕಾರಿ ಸುಳ್ಳು ಹೇಳುತ್ತಿದ್ದಾರೆ ಎಂದು ದೂರುದಾರ ಆರೋಪಿಸಿದರು. ಈ ನಡುವೆ, ಅಧಿಕಾರಿಯೇ ಫೋಟೋ ತೋರಿಸಿಬಿಟ್ಟರು. ಅದರಲ್ಲಿ ಒತ್ತುವರಿ ತೆರವು ಅಪೂರ್ಣವಾಗಿರುವುದು, ರಸ್ತೆಯ ಜಾಗ ಆಕ್ರಮಿಸಿಕೊಂಡು ಮನೆ ಕಟ್ಟಿಕೊಂಡಿರುವುದು ಸ್ಪಷ್ಟವಾಗಿ ಕಾಣುತ್ತಿತ್ತು.

ಇದರಿಂದ ಕೆಂಡಾಮಂಡಲವಾದ ಉಪಲೋಕಾಯುಕ್ತರು, ದೂರುದಾರರು ಅಲ್ಲ, ನೀವು ಫೋಟೋ ತೋರಿಸಿ ಸಿಕ್ಕಿ ಹಾಕಿಕೊಂಡಿದ್ದೀರಿ. ನೀವು ತೋರಿಸುವ ಫೋಟೋದಲ್ಲಿ ಅರೆಬರೆ ಕೆಲಸವಾಗಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ವಾಸ್ತವ ಒಪ್ಪಿಕೊಳ್ಳಿ. ಸುಳ್ಳು ಹೇಳಿ ನಮಗೆ ದಾರಿ ತಪ್ಪಿಸಲು ನೋಡುತ್ತೀರಾ. ಹೀಗೆ ಮಾಡಿದರೆ ಮನೆಗೆ ಕಳುಹಿಸಿ ಬಿಡುತ್ತೇನೆ ಎಂದು ಎಚ್ಚರಿಸಿದರು.

ಒತ್ತುವರಿ ಮಾಡುವವರೆಗೂ ಏನು ಮಾಡುತ್ತಿದ್ದೀರಿ? ಇನ್ನೂ 15 ದಿನದೊಳಗೆ ಒತ್ತುವರಿ ತೆರವು ಮಾಡಿ ಛಾಯಾಚಿತ್ರ ಸಹಿತ ವರದಿ ಸಲ್ಲಿಸಿ. ತಪ್ಪಿದ್ದಲ್ಲಿ ಅಮಾನತು ಮಾಡಲು ಆದೇಶಿಸಲಾಗುವುದು ಎಂದು ಎಚ್ಚರಿಸಿದರು.

ನನಗೆ ಕಿವುಡಾ, ನಾನೇನು ದಡ್ಡನಾ?: ಅಕ್ರಮವಾಗಿ ಖಾತೆ ಮಾಡಿಕೊಡಲಾಗಿದೆ. ತಾತನ ಆಸ್ತಿಯನ್ನು ಅಜ್ಜಿಗೆ ವರ್ಗಾವಣೆ ಮಾಡುವ ಬದಲು, ತಮ್ಮನ ಮಗನಿಗೆ ಮಾಡಿಕೊಡಲಾಗಿದೆ ಎಂದು ದೂರುದಾರರೊಬ್ಬರು ಆಕ್ಷೇಪಿಸಿದರು.

ಇದಕ್ಕೆ ಸಮರ್ಥನೆ ಕೊಡುತ್ತಿದ್ದ ಪಿಡಿಒ, ನಾನು ಹೊಸದಾಗಿ ಬಂದಿದ್ದೇನೆ. ಇದನ್ನು ಹಿಂದಿನವರು ಮಾಡಿದ್ದಾರೆ ಎಂದು ಎರಡು, ಮೂರು ಬಾರಿ ಹೇಳಿದರು. ಇದರಿಂದ ಕೋಪಗೊಂಡ ಉಪಲೋಕಾಯುಕ್ತರು, ಒಂದೇ ವಿಷಯವನ್ನು ಪದೇ ಪದೇ ಹೇಳುತ್ತೀಯಾ. ನನಗೆ ಕಿವುಡಾ, ನಾನೇನು ದಡ್ಡನಾ? ನಿನಗೆ ಕಾಮನ್‌ಸೆನ್ಸ್ ಇಲ್ಲವೇ? ಎಂದು ಸಿಡಿಮಿಡಿಗೊಂಡರು.

ಖಾತೆ ಬದಲಾವಣೆ ಕುರಿತು ತಿ.ನರಸೀಪುರ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸ್ಥಳ ಪರಿಶೀಲನೆ ಮಾಡಿ, ಈ ಪ್ರಕರಣವನ್ನು ಕಾನೂನು ಪ್ರಕಾರ ಇತ್ಯರ್ಥಪಡಿಸಬೇಕು. ಈ ಹಂತದಲ್ಲಿ ದೂರುದಾರರಿಗೆ ನ್ಯಾಯ ದೊರೆಯದಿದ್ದರೆ ಮತ್ತೊಮ್ಮೆ ಲೋಕಾಯುಕ್ತರಿಗೆ ದೂರು ಸಲ್ಲಿಸಲು ಅವಕಾಶ ಕಲ್ಪಿಸಿ ಪ್ರಕರಣವನ್ನು ವಿಲೇವಾರಿ ಮಾಡಿದರು.

ಲೋಕಾಯುಕ್ತ ಜಂಟಿ ನಿಬಂಧಕರು(ವಿಚಾರಣೆ) ವಿ.ಎನ್.ವಿಮಲಾ, ಲೋಕಾಯುಕ್ತ ಕಾರ್ಯದರ್ಶಿ ಕಿರಣ್ ಪಾಟೀಲ್, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ, ಜಿಪಂ ಸಿಇಒ ಯುಕೇಶ್‌ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ, ಪಾಲಿಕೆ ಆಯುಕ್ತ ತನ್ವೀರ್ ಆಸೀಫ್, ಮೈಸೂರು ಲೋಕಾಯುಕ್ತ ಎಸ್‌ಪಿ ಟಿ.ಜೆ.ಉದೇಶ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ಹೀಗೆ ಮಾಡಿ, ಹಾಗೆ ಮಾಡಿ ಎನ್ನಲು ಅಧಿಕಾರವಿಲ್ಲ

ಬನ್ನೂರಿನ ಸರ್ವೇ ನಂ.350ರಲ್ಲಿರುವ ನಮ್ಮ ಜಮೀನಿನ ಜಾಗಕ್ಕೆ ಪೋಡಿ ಮಾಡಿಕೊಡುತ್ತಿಲ್ಲ ಎಂಬ ಸರ್ವಮಂಗಳಾ ಅವರ ದೂರಿನ ಕುರಿತು ವಿಚಾರಣೆ ನಡೆಸಿದ ಉಪಲೋಕಾಯುಕ್ತರು, ಒಂದು ತಿಂಗಳ ಒಳಗೆ ಸರ್ವೇ ಮಾಡಿ ವರದಿ ನೀಡಿ ಎಂದರು.

ಜತೆಗೆ, ಯಾವುದೇ ಪೋಡಿಯನ್ನು ಹೀಗೆ ಮಾಡಿ, ಹಾಗೆ ಮಾಡಬೇಡಿ ಎಂದು ಹೇಳಲು ಅರ್ಜಿದಾರರಿಗೆ ಅಧಿಕಾರ ಇಲ್ಲ. ನಿಯಮಾವಳಿ ಪ್ರಕಾರ ಪೋಡಿ ಕೆಲಸವನ್ನು ಪೂರ್ಣಗೊಳಿಸಬೇಕು. ಇವರಿಗೆ ನಿರ್ದೇಶನ ನೀಡುವ ಅಧಿಕಾರ ಅರ್ಜಿದಾರರಿಗೆ ಇರಲ್ಲ. ಹೀಗಾಗಿ, ಯಾರು ಬರುತ್ತಾರೋ ಬಿಡುತ್ತಾರೋ ಪೋಡಿ ಮಾಡಿ. ಸಮಸ್ಯೆ ಇದ್ದರೆ ಪೊಲೀಸ್ ರಕ್ಷಣೆ ತೆಗೆದುಕೊಳ್ಳಿ ಎಂದು ಎಲ್ಲ ಭೂಮಾಪಕರಿಗೆ ತಿಳಿಸಿದರು.

ಪೊಲೀಸ್ ಇನ್‌ಸ್ಪೆಕ್ಟರ್, ಉಪನೋಂದಣಿ ಅಧಿಕಾರಿ, ಇಬ್ಬರು ಖಾಸಗಿ ವ್ಯಕ್ತಿಗಳ ವಿರುದ್ಧ ನೀಡಿದ್ದ ದೂರಿನ ವಿಚಾರಣೆ ಮಾಡಿದ ಉಪಲೋಕಾಯುಕ್ತರು, ಇದು ನಮ್ಮ ವ್ಯಾಪ್ತಿಗೆ ಬರಲ್ಲ ಎಂದು ಪ್ರಕರಣ ಮುಕ್ತಾಯಗೊಳಿಸಿದರು. ಓವರ್ ಹೆಡ್ ಟ್ಯಾಂಕ್ ನಿರ್ಮಾಣ

ಲೋಕಾಯುಕ್ತರು ದಾಖಲಿಸಿಕೊಂಡ ಸ್ವಯಂಪ್ರೇರಿತ ದೂರಿನಿಂದ ತಲಕಾಡಿನಲ್ಲಿ ಹೊಸ ಓವರ್ ಹೆಡ್ ಟ್ಯಾಂಕ್ ನಿರ್ಮಾಣವಾಗುತ್ತಿದೆ.

2.50 ಲಕ್ಷ ಲೀಟರ್ ಸಂಗ್ರಹ ಸಾಮರ್ಥ್ಯದ ಟ್ಯಾಂಕ್ ದುಸ್ಥಿತಿಗೊಂಡಿರುವ ಕುರಿತು ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾಗಿತ್ತು. ಇದನ್ನು ಆಧರಿಸಿ ಲೋಕಾಯುಕ್ತರು ಸ್ವಯಂ ಪ್ರಕರಣ ದಾಖಲಿಸಿಕೊಂಡಿದ್ದರು. ಇದರ ಫಲಶ್ರುತಿಯಾಗಿ, ಶಿಥಿಲಗೊಂಡ ಟ್ಯಾಂಕ್ ತೆರವುಗೊಳಿಸಿ, ಹೊಸ ಟ್ಯಾಂಕ್ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಶೀಘ್ರದಲ್ಲೇ ಅನುಮೋದನೆ ದೊರೆಯುವ ನಿರೀಕ್ಷೆ ಇದೆ. ಜತೆಗೆ, ಪರ್ಯಾಯ ನೀರಿನ ವ್ಯವಸ್ಥೆ ಮಾಡಿ ಜನರಿಗೆ ತೊಂದರೆಯಾಗದಂತೆ ಮಾಡಲಾಗಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಉಪಲೋಕಾಯುಕ್ತರು, ತ್ವರಿತವಾಗಿ ಟ್ಯಾಂಕ್ ನಿರ್ಮಾಣ ಮಾಡಿ ಎಂದು ತಾಕೀತು ಮಾಡಿದರು. ಕಾನೂನು ಗೊತ್ತಿಲ್ಲ, ತಿಳಿದುಕೊಳ್ಳಲೂ ಯತ್ನಿಸಲ್ಲ

ಬಹಳಷ್ಟು ದೂರುದಾರರಿಗೆ ಕಾನೂನು ಗೊತ್ತಿಲ್ಲ. ಅದನ್ನು ತಿಳಿದುಕೊಳ್ಳಲೂ ಪ್ರಯತ್ನಿಸಲ್ಲ. ಯಾವ ಅರ್ಜಿಯನ್ನು ಎಲ್ಲಿ ಕೊಡಬೇಕು ಎಂಬ ಜ್ಞಾನವೂ ಇರಲ್ಲ. ಬಹಳಷ್ಟು ಜನರು ಇದೇ ತಪ್ಪನ್ನೇ ಪುನರಾವರ್ತನೆ ಮಾಡುತ್ತಾರೆ. ಹೀಗಾಗಿ, ಮೊದಲು ಕಾನೂನು ತಿಳಿದುಕೊಳ್ಳಬೇಕು ಎಂದು ದೂರುದಾರ ಎಂ.ಲಿಂಗರಾಜು ಅವರಿಗೆ ಉಪ ಲೋಕಾಯುಕ್ತರು ತಾಕೀತು ಮಾಡಿದರು. ಜತೆಗೆ, ಸಾರ್ವಜನಿಕರಿಗೆ ಯಾರಿಗೆ ದೂರು ಕೊಡಬೇಕು ಎಂಬುದು ಗೊತ್ತಾಗಲ್ಲ. ಸಂಬಂಧವಿಲ್ಲದ ಕೇಸ್‌ಗಳನ್ನೆಲ್ಲವನ್ನೂ ಲೋಕಾಯುಕ್ತರಿಗೆ ಕೊಟ್ಟು ಕೈ ತೊಳೆದುಕೊಳ್ಳುತ್ತಾರೆ. ಇದು ರಾಜ್ಯಾದ್ಯಂತ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ತಡವಾಗಿ ಬರುವ ಸಿಬ್ಬಂದಿಗೆ ದೂರಿನ ಬಿಸಿ

ಪಿಡಿಒ, ಗ್ರಾಪಂ ನೌಕರರು ಸಕಾಲಕ್ಕೆ ಕೆಲಸಕ್ಕೆ ಹಾಜರಾಗುತ್ತಿಲ್ಲ. ಎಲ್ಲರೂ ತಡವಾಗಿ ಬರುತ್ತಾರೆ ಎಂದು ಡಿ.ಲಿಂಗರಾಜು ಎಂಬುವರ ದೂರಿನ ಫಲವಾಗಿ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೊಂಡಿರುವುದು ತಿಳಿದು ಬಂತು. ಈ ದೂರಿನ ಕುರಿತು ಪ್ರತಿಕ್ರಿಯೆ ನೀಡಿದ ತಿ.ನರಸೀಪುರ ತಾಪಂ ಇಒ, ಆನ್‌ಲೈನ್ ಆಧಾರಿತ ಪಂಚತಂತ್ರ ವ್ಯವಸ್ಥೆಯ ತೊಂದರೆಯಿಂದಾಗಿ ಎರಡು ತಿಂಗಳ ಹಾಜರಾತಿ ಸಮಸ್ಯೆಯಾಗಿದೆ. ಇದೀಗ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ ಜಾರಿ ಮಾಡಿದ್ದರಿಂದ ಈ ಸಮಸ್ಯೆ ಬಗೆಹರಿದಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net