

ಮೈಸೂರು; ಉನ್ನತ ಶಿಕ್ಷಣದಲ್ಲಿ ಮೂಲವಿಜ್ಞಾನ ವಿಷಯ ಕಲಿಕೆಗೆ ವಿದ್ಯಾರ್ಥಿಗಳಿಂದ ನಿರಾಸಕ್ತಿ ವ್ಯಕ್ತವಾಗುತ್ತಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಕಳವಳ ವ್ಯಕ್ತಪಡಿಸಿದರು.
ಮೈವಿವಿ ಶಾಲಾ ವಿಜ್ಞಾನ ಶಿಕ್ಷಣ ಕೇಂದ್ರದ ವತಿಯಿಂದ ಭೌತಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸೋಮವಾರ ಆಯೋಜಿಸಿದ್ದ ವಿಜ್ಞಾನ ಕಲಿಕಾ ಸ್ಪಂದನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಪದವಿ ಪೂರ್ವ ಕಾಲೇಜಿನ ಹಂತದಲ್ಲಿ ವಿಜ್ಞಾನ ಆಯ್ಕೆ ಮಾಡುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಲೇ ಸಾಗಿದೆ. ಉನ್ನತ ಶಿಕ್ಷಣ ಮಟ್ಟದಲ್ಲಿ ಈ ಪ್ರಮಾಣ ಇನ್ನಷ್ಟು ಕುಸಿದಿದೆ. ಇದರಿಂದಾಗಿ ಸ್ನಾತಕ(ಬಿಎಸ್ಸಿ), ಸ್ನಾತಕೋತ್ತರ(ಎಂಎಸ್ಸಿ) ಪದವಿಯಲ್ಲಿ ಮೂಲ ವಿಜ್ಞಾನ ಓದುವವರಿಲ್ಲದಂತಾಗಿದೆ. ಸಂಶೋಧನೆಗಳು ಕಡಿಮೆಯಾಗುತ್ತಿವೆ. ಇದರಿಂದ ವಿಜ್ಞಾನ ಲೋಕ ಸೊರಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮೂಲ ವಿಜ್ಞಾನ ಕಲಿಕೆ ಕುರಿತು ಉಂಟಾಗಿರುವ ಸಮಸ್ಯೆ ರಾಜ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ದೇಶ, ವಿದೇಶದಲ್ಲೂ ಇದೇ ಸಮಸ್ಯೆ ಕಂಡುಬರುತ್ತಿದೆ ಎಂದರು.
ವಿಶ್ರಾಂತ ಕುಲಪತಿ ಪ್ರೊ.ಪಿ.ವೆಂಕಟರಾಮಯ್ಯ ಮಾತನಾಡಿ, ಮೂಲ ವಿಜ್ಞಾನ ಕಲಿತ ಪದವೀಧರರಿಗೆ ವಿಪುಲ ಅವಕಾಶಗಳಿವೆ. ಆದರೆ, ಈ ಕುರಿತು ಅರಿವಿನ ಕೊರತೆ ಇದೆ ಎಂದರು.
ಮೂಲ ವಿಜ್ಞಾನ ಕಲಿತ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ದೇಶ-ವಿದೇಶದಲ್ಲಿರುವ ವಿವಿಧ ಸಂಶೋಧನಾ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು, ಕೈಗಾರಿಕೆಗಳಲ್ಲಿ ಉನ್ನತ ಮಟ್ಟದ ಉದ್ಯೋಗಾವಕಾಶಗಳು ಇವೆ. ಈ ಕುರಿತು ಅರಿವು ಮೂಡಿಸಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕು. ಜತೆಗೆ, ಮೂಲ ವಿಜ್ಞಾನ ಕಲಿಕೆಗೆ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಬೇಕು ಎಂದರು.
ಕಾರ್ಯಕ್ರಮದ ಸಂಚಾಲಕ ಪ್ರೊ.ಎಂ.ಎಸ್.ಚಂದ್ರಶೇಖರ್, ಸಿಎಫ್‌ಟಿಆರ್‌ಐನ ನಿವೃತ್ತ ವಿಜ್ಞಾನಿ ಡಾ.ಎನ್.ಭಾಗ್ಯಲಕ್ಷ್ಮೀ, ಬೋಧಕರಾದ ಪ್ರೊ.ಬಿ.ಕೆ.ಜಗದೀಶ್, ಡಾ.ಆನಂದ್ ಇತರರು ಇದ್ದರು.