

ಅಥಣಿ: ಕ್ಷೇತ್ರದಲ್ಲಿ ರೈತರ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಕೃಷಿ ಮಹಾವಿದ್ಯಾಲಯ ಸ್ಥಾಪಿಸುವ ಸಂಕಲ್ಪವಿದೆ. ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಮಂಜೂರಾತಿ ಪಡೆಯಲು ಶ್ರಮಿಸಲಾಗುವುದು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಪಟ್ಟಣದ ಹೊರವಲಯದ ಬೀಜೋತ್ಪನ್ನ ಕೇಂದ್ರದಲ್ಲಿ ಸೋಮವಾರ ಕೃಷಿ ಇಲಾಖೆ ವತಿಯಿಂದ ಗೋದಾಮು ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಕೃಷಿ ಇಲಾಖೆ ಪರಿಕರಗಳ ದಾಸ್ತಾನಿಗಾಗಿ ಗೋದಾಮು ನಿರ್ಮಾಣಕ್ಕೆ 25ಲಕ್ಷ ರೂ. ಅನುದಾನ ಬಂದಿದ್ದು, ಕರ್ನಾಟಕ ಗ್ರಾಮೀಣ ಮೂಲಸೌಕರ್ಯಗಳ ಅಭಿವೃದ್ದಿ ನಿಗಮಕ್ಕೆ ನಿರ್ಮಾಣ ಕಾಮಗಾರಿ ಜವಾಬ್ದಾರಿ ವಹಿಸಲಾಗಿದೆ. ನಿಗದಿತ ಅವಧಿಯಲ್ಲಿ ಗುಣಮಟ್ಟದ ಕಾಮಗಾರಿ ನಿರ್ಮಿಸಲು ಸೂಚಿಸಲಾಗಿದೆ ಎಂದರು.
ಅಥಣಿ ಪಟ್ಟಣ ಸೇರಿ ವಿವಿಧೆಡೆ ಅಗತ್ಯವಿರುವ ಮೂರು ಸರ್ಕಾರಿ ಪ್ರೌಢಶಾಲೆಗಳ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮಂಜೂರಾತಿ ಪಡೆಯಲು ಕ್ರಮ ವಹಿಸಲಾಗುವುದು. ಶೀಘ್ರದಲ್ಲಿಯೇ ಕೇಂದ್ರ ಸರ್ಕಾರದ ಅನುಮೋದನೆ ಪಡೆದು ಕೊಕಟನೂರ ಪಶು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ತರಗತಿಗಳನ್ನು ಆರಂಭಿಸಲು ಪ್ರಯತ್ನ ಮಾಡುತ್ತಿದ್ದೇನೆ ಎಂದರು.
ಸಹಾಯಕ ಕೃಷಿ ನಿರ್ದೇಶಕ ನಿಂಗಣಗೌಡ ಬಿರಾದಾರ,ಅಭಿಯಂತ ಸಂತೋಷ ಶೇಗುಣಿಸಿ, ಕೆಆರ್‌ಐಡಿಎಲ್ ಸಹಾಯಕ ಅಭಿಯಂತ ಸದಾಶಿವಯ್ಯ, ಮುಖಂಡರಾದ ನರಸು ಬಡಕಂಬಿ, ಶ್ರೀಶೈಲ ನಾಯಿಕ, ಅರುಣ ಬಾಸಿಂಗಿ ಇತರರು ಇದ್ದರು.