ಉನ್ನತ ಶಿಕ್ಷಣ ಪಡೆದು ಕೀರ್ತಿ ತನ್ನಿ, ಸಚಿವ ಎಂಟಿಬಿ ನಾಗರಾಜ್ ಹಾರೈಕೆ, ಟೌನ್ ಬ್ಯಾಂಕ್‌ನಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

25-Manjunath-HSK-01
Published on

ಹೊಸಕೋಟೆ: ಉನ್ನತ ಶಿಕ್ಷಣ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ದೇಶಕ್ಕೆ ಕೀರ್ತಿ ತರಬೇಕು ಎಂದು ಪೌರಾಡಳಿತ ಮತ್ತು ಸಣ್ಣಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಹೇಳಿದರು.

ನಗರದ ದಿ ಟೌನ್ ಕೋ ಆಪರೇಟಿವ್ ಬ್ಯಾಂಕ್‌ನಿಂದ ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಿ ಮಾತನಾಡಿದರು.

ದಿ ಟೌನ್ ಕೋ ಆಪರೇಟಿವ್ ಬ್ಯಾಂಕ್‌ನಿಂದ 252 ವಿದ್ಯಾರ್ಥಿಗಳಿಗೆ 7.1 ಲಕ್ಷ ರೂ. ಪ್ರೋತ್ಸಾಹ ಧನದ ಚೆಕ್ ವಿತರಿಸಲಾಗಿದೆ ಎಂದರು.

ತಂತ್ರಜ್ಞಾನ ಬೆಳೆದಂತೆಲ್ಲ ಕಲಿಕಾ ವಿಚಾರದಲ್ಲಿ ಸಾಕಷ್ಟು ಸ್ಪರ್ಧೆ ಏರ್ಪಡುತ್ತಿದೆ. ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಹೆಚ್ಚಿನ ಪರಿಶ್ರಮ ಹಾಕಬೇಕಿದೆ ಎಂದು ಕಿವಿಮಾತು ಹೇಳಿದರು.

2 ವರ್ಷದಿಂದ ಕರೊನಾ ಕಾರಣದಿಂದಾಗಿ ದೇಶದ ಬಹಳಷ್ಟು ಬ್ಯಾಂಕ್‌ಗಳು ದೀವಾಳಿಯಾಗಿವೆ. ಆದರೆ 105 ವರ್ಷದ ಇತಿಹಾಸವಿರುವ ದಿ ಟೌನ್ ಕೋ ಆಪರೇಟಿವ್ ಬ್ಯಾಂಕ್ ಸಾವಿರಾರು ಷೇರುದಾರರಿಗೆ ಸಕಾಲದಲ್ಲಿ ಸಾಲ ವಿತರಣೆ ಮಾಡಿ ಲಾಭದಲ್ಲಿ ಮುನ್ನೆಡೆಯುತ್ತಿರುವುದು ಮೆಚ್ಚುವಂಥ ವಿಷಯ ಎಂದರು.

3.62 ಕೋಟಿ ರೂ.ನಿವ್ವಳ ಲಾಭ: ದಿ ಟೌನ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೃಷ್ಣಪ್ಪ ಮಾತನಾಡಿ, ಗ್ರಾಹಕರಿಗೆ ಉತ್ತಮ ಸೇವೆ ನೀಡಲಾಗುತ್ತಿದೆ, ಪ್ರಸ್ತುತ 225 ಕೋಟಿ ರೂಪಾಯಿಗೂ ಅಧಿಕ ಠೇವಣಿ ಇದ್ದು, 162 ಕೋಟಿ ರೂ.ಸಾಲ ನೀಡಲಾಗಿದೆ, 2021 ನೇ ಸಾಲಿನ ಮಾರ್ಚ್ ತಿಂಗಳಿಗೆ 3.62 ಕೋಟಿ ರೂ. ನಿವ್ವಳ ಲಾಭಗಳಿಸಿದೆ ಎಂದು ಮಾಹಿತಿ ನೀಡಿದರು.

3.63 ಲಕ್ಷ ಮೌಲ್ಯದ ಐಸಿಯು ಪರಿಕರ ವಿತರಣೆ: ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವ ದೃಷ್ಟಿಯಿಂದ ನಗರದ ದಿ ಟೌನ್ ಕೋ ಆಪರೇಟಿವ್ ಬ್ಯಾಂಕ್ ಸಾರ್ವಜನಿಕ ಆಸ್ಪತ್ರೆಗೆ ವೈದ್ಯಕೀಯ ಪರಿಕರ ವಿತರಿಸಿದೆ ಎಂದು ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು.

ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶನಿವಾರ ಬ್ಯಾಂಕ್‌ನಿಂದ 3.63 ಲಕ್ಷ ರೂ. ವೆಚ್ಚದ ವೈದ್ಯಕೀಯ ಪರಿಕರ ವಿತರಿಸಿ ಮಾತನಾಡಿದರು. ಕರೊನಾ ಸಂದರ್ಭದಲ್ಲಿ ಮಕ್ಕಳಿಗೆ ಯಾವುದೇ ಸಮಸ್ಯೆಯಾಗದಂತೆ ಎಚ್ಚರವಹಿಸಲು ಸಾಕಷ್ಟು ಕ್ರಮಕೈಗೊಂಡಿದ್ದು, ಮತ್ತಷ್ಟು ಸವಲತ್ತುಗಳನ್ನು ಒದಗಿಸಲಾಗುತ್ತಿದೆ ಎಂದರು.

ಕರೊನಾ ಸಂದರ್ಭದಲ್ಲೂ ಬ್ಯಾಂಕ್ 3 ಕೋಟಿ ರೂ.ಗೂ ಅಧಿಕ ಲಾಭದಲ್ಲಿ ಕಾರ್ಯನಿರ್ವಹಿಸುತ್ತಿದೆ, ಲಾಭದ ಹಣವನ್ನು ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಕಾರ್ಯಗಳಿಗೆ ಬಳಸುತ್ತಿದೆ, ಅಲ್ಲದೆ ಕರೊನಾ ವೇಳೆ ಬ್ಯಾಂಕ್‌ನಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ 5.6 ಲಕ್ಷ ರೂ. ನೀಡಿ ಸಮಾಜಪರ ಕಾರ್ಯಗಳಲ್ಲಿ ಮುಂಜೂಣಿಯಲ್ಲಿದ್ದು, ಬ್ಯಾಂಕ್ ವಹಿವಾಟು ಹೀಗೆ ಮುಂದುವರಿಯಲಿ. ಎಂಟಿಬಿ ನಾಗರಾಜ್, ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net