

ಕೊಪ್ಪ: ಆಟೋ ಚಾಲಕ ಪ್ರದೀಪ್ ಗೌಡ ಸಾವಿನ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ವಿಶ್ವ ಹಿಂದು ಪರಿಷತ್, ಬಜರಂಗದಳ ಕಾರ್ಯಕರ್ತರು, ಸಾರ್ವಜನಿಕ ಹಿತರಕ್ಷಣಾ ವೇದಿಕೆಯಿಂದ ಶನಿವಾರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಲಾಯಿತು. ಪ್ರದೀಪ್ ಗೌಡ ಸಾವಿನ ಕುರಿತು ಶಂಕೆ ಇದೆ. ಉನ್ನತ ಮಟ್ಟದ ತನಿಖೆ ಮೂಲಕ ಸತ್ಯವನ್ನು ಬಹಿರಂಗಪಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ವಿಹಿಂಪ ಮುಖಂಡ ಆರ್.ಡಿ.ಮಹೇಂದ್ರ ಮಾತನಾಡಿ, ಮಲೆನಾಡು ಭಾಗದಲ್ಲಿ ಹಿಂದು ಯುವಕರ ಸಾವುಗಳು ಹೆಚ್ಚಾಗುತ್ತಿವೆ. ಹಿಂದು ಸಂಘಟನೆ ಪೊಲೀಸ್ ಇಲಾಖೆ ಮೇಲೆ ಭರವಸೆ ಹೊಂದಿದೆ. ಸಂಘಟಕರ ತಾಳ್ಮೆಯನ್ನು ಇಲಾಖೆ ಪರೀಕ್ಷೆ ಮಾಡದೆ ಪ್ರದೀಪ್ ಸಾವಿನ ತನಿಖೆ ಚುರುಕುಗೊಳಿಸಬೇಕು ಎಂದು ಒತ್ತಾಯಿಸಿದರು.
ಸಾವು ಅನುಮಾನಾಸ್ಪದವಾಗಿರುವುದರಿಂದ ಪ್ರಕರಣದಲ್ಲಿ ಯಾರನ್ನು ವಿಚಾರಣೆ ನಡೆಸಿದ್ದೀರಿ? ಮರಣೋತ್ತರ ಪರೀಕ್ಷೆ ವರದಿ ಬರಲಿ ಎಂದು ಹೇಳದೆ ತನಿಖೆ ಚುರುಕುಗೊಳಿಸಿ. ಸೆ.10ರವರೆಗೆ ಕಾಯುತ್ತೇವೆ. ಅಷ್ಟರೊಳಗೆ ಸಾವಿನ ಕಾರಣ ತಿಳಿಸದಿದ್ದರೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.
ಬಜರಂಗದಳ ತಾಲೂಕು ಸಂಚಾಲಕ ರಾಕೇಶ್ ಹಿರೇಕೊಡಿಗೆ ಮಾತನಾಡಿ, ಪ್ರದೀಪ್ ಸಾವಿನ ಬಗ್ಗೆ ಜನರಲ್ಲಿ ಗೊಂದಲ ಉಂಟಾಗಿದೆ. ವಾರ ಕಳೆಯುತ್ತ ಬಂದರೂ ತನಿಖೆ ಎತ್ತ ಸಾಗಿದೆ ಎಂಬುದರ ಕುರಿತು ಸ್ಪಷ್ಟ ಮಾಹಿತಿ ನೀಡುತ್ತಿಲ್ಲ ಎಂದು ದೂರಿದರು.
ಡಿವೈಎಸ್ಪಿ ಗುಂಜನ್ ಆರ್ಯ ಮಾತನಾಡಿ, ಎಲ್ಲ ಆಯಾಮಗಳಲ್ಲಿಯೂ ತನಿಖೆ ನಡೆಸುತ್ತಿದ್ದೇವೆ. ಸಾವು ಅನುಮಾನಾಸ್ಪದವಾಗಿರುವುದರಿಂದ ಪೊಲೀಸರು ಏನೂ ಹೇಳಲು ಸಾಧ್ಯವಿಲ್ಲ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ತನಿಖೆಗೆ ಇನ್ನಷ್ಟು ಬಲ ಸಿಗಲಿದೆ. ಮೃತರ ಕುಟುಂಬಕ್ಕೆ ನ್ಯಾಯ ದೊರಕಿಸುವ ಕೆಲಸ ಇಲಾಖೆ ಮಾಡುತ್ತದೆ ಎಂದರು.