ಉನ್ನತ ಮಟ್ಟಕ್ಕೆ ಶಿಕ್ಷಣವೇ ಪ್ರಮುಖ ಅಸ್ತ್ರ

School
Published on

ನ್ಯಾಮತಿ: ಉನ್ನತ ಮಟ್ಟ ತಲುಪಲು ಶಿಕ್ಷಣವನ್ನೇ ಪ್ರಮುಖ ಅಸ್ತ್ರವಾಗಿ ಬಳಸಿಕೊಳ್ಳಬೇಕು ಎಂದು ನಿವೃತ್ತ ಉಪನ್ಯಾಸಕ ಎಸ್.ಆರ್.ಬಸವರಾಜಪ್ಪ ಸಲಹೆ ನೀಡಿದರು.

ತಾಲೂಕು ದಾನಿಹಳ್ಳಿ ಗ್ರಾಮ ಹೊರವಲಯದ ತರಳಬಾಳು ಜಗದ್ಗುರು ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶಿವಕುಮಾರ ಸಿರಿ ಸಂಭ್ರಮ 2024-25ನೇ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.

ಸಿರಿಗೆರೆಯ ಶಿವಕುಮಾರ ಶಿವಾಚಾರ್ಯ ಶ್ರೀ ಲಿಂಗೈಕ್ಯರಾಗಿಲ್ಲ. ಸಮಾಜಮುಖಿ ಕಾರ್ಯಗಳ ಮೂಲಕ ಅವರು ನಮ್ಮೊಡನೆ ಸದಾ ಜೀವಂತ. ಹೀಗಾಗಿ ಮಾರ್ಗದರ್ಶನ ನೀಡುತ್ತ ಉತ್ತಮ ಕಾರ್ಯಗಳನ್ನು ಮಾಡಿಸುತ್ತಿದ್ದಾರೆ ಎಂಬ ನಂಬಿಕೆ ಭಕ್ತರದ್ದಾಗಿದೆ ಎಂದರು.

ಇಲ್ಲಿನ ವಿದ್ಯಾಸಂಸ್ಥೆಯೂ 2006ರಲ್ಲಿ ಉದಯವಾಯಿತು. ಬೃಹತ್ ಕಟ್ಟಡ, ವಿಶಾಲ ಆಟದ ಮೈದಾನ ಸೇರಿ ಮೂಲ ಸೌಕರ್ಯದೊಂದಿಗೆ ಎಲ್‌ಕೆಜಿಯಿಂದ ಎಸ್ಸೆಸ್ಸೆಲ್ಸಿವರೆಗೂ ಹಂತ-ಹಂತವಾಗಿ ಬೆಳೆದು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದೆ ಎಂದು ತಿಳಿಸಿದರು.

ವಿದ್ಯಾಸಂಸ್ಥೆಯಲ್ಲಿ ಶಿಕ್ಷಣ ಪಡೆದವರೂ ಉನ್ನತ ಸ್ಥಾನ ಅಲಂಕರಿಸಿದ್ದಾರೆ. ಇದಕ್ಕೆ ಇಲ್ಲಿನ ಶಿಕ್ಷಕರ ಶ್ರಮವೇ ಕಾರಣ. ವಿದ್ಯಾರ್ಥಿಗಳು ಆಟ, ಪಾಠಗಳಲ್ಲೂ ಮುಂದಿದ್ದು, ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಶಿಕ್ಷಣಕ್ಕಾಗಿ ಭೂ-ದಾನ ಮಾಡಿದ ದಾನಿಹಳ್ಳಿ ರೈತಾಪಿ ಸಮೂಹವನ್ನು ಎಂದಿಗೂ ಮರೆಯುವಂತಿಲ್ಲ ಎಂದು ಸ್ಮರಿಸಿದರು.

ಇದೇ ವೇಳೆ ಮುಖ್ಯ ಶಿಕ್ಷಕಿ ಶ್ವೇತಾ ವಾರ್ಷಿಕ ವರದಿ ವಿವರಿಸಿದರು. 2023-24ರ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಕ್ರೀಡಾಕೂಟದಲ್ಲಿ ವಿಜೇತರಾದ ಪಾಲಕರಿಗೆ ಬಹುಮಾನ ವಿತರಿಸಲಾಯಿತು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

ಶಿವಮೊಗ್ಗ ವಲಯ ಪ್ರಾದೇಶಿಕ ಅಧಿಕಾರಿ ವಸಂತ ಎನ್.ಬಡಿಗೇರ್ ಉದ್ಘಾಟಿಸಿದರು. ಹೊನ್ನಾಳಿ ಶಿವ ಬ್ಯಾಂಕ್ ಅಧ್ಯಕ್ಷ ಕೆ.ಎಸ್.ಶಿವಕುಮಾರ್, ಉಪನ್ಯಾಸಕ ಗೊಲ್ಲರಹಳ್ಳಿ ಮಂಜುನಾಥ, ವಿದ್ಯಾಸಂಸ್ಥೆಯ ಸಲಹಾ ಸಮಿತಿ ಅಧ್ಯಕ್ಷ ಡಿ.ತೀರ್ಥಲಿಂಗಪ್ಪ, ಡಾ.ಶಶಿಧರ್‌ಗೌಡ್ರು, ಪಿ.ಜಿ.ಈಶ್ವರಪ್ಪ, ಜಿ.ಮಲ್ಲೇಶಪ್ಪ, ಎಸ್.ಪರಮೇಶ್ವರಪ್ಪ, ಡಿ.ಜಯಪ್ಪ, ಕೆ.ಹಾಲೇಶಪ್ಪ, ಜಿ.ಉಜ್ಜಿನಪ್ಪ, ಟಿ.ನಾಗರಾಜಪ್ಪ, ಕೆ.ಸಿ.ಬಸವರಾಜಪ್ಪ, ಎಂ.ಜಯಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net