ಉನ್ನತ ಗುರಿ ಇದ್ದಾಗ ಮಾತ್ರ ಸಾಧನೆ ಸಾಧ್ಯ: ನಿರಂಜನ್ ಮುಕುಂದನ್

24
ನಗರದ ಶ್ರೀರಾಮಕೃಷ್ಣ ಆಶ್ರಮದಲ್ಲಿ ಸೋಮವಾರ ಆಯೋಜಿಸಿದ್ದ ‘ಮೀಟ್ ದಿ ಚಾಂಪಿಯನ್’ ವಿಶೇಷ ಕಾರ್ಯಕ್ರಮವನ್ನು ನಿರಂಜನ್ ಮುಕುಂದನ್ ಚಾಲನೆ ನೀಡಿದರು. ಸ್ವಾಮಿ ಮುಕ್ತಿದಾನಂದಾಜಿ, ಸ್ವಾಮಿ ಯುಕ್ತೇಶಾನಂದಾಜಿ, ಎಸ್.ಬಾಲಾಜಿ, ಡಾ. ಮೋನಿಕಾ, ಡಿ.ಸುದರ್ಶನ್, ಬಿ.ಆರ್.ರವಿ ಇತರರು ಇದ್ದರು.
Published on

ಮೈಸೂರು: ಉನ್ನತವಾದ ಗುರಿ ಇದ್ದಾಗ ಮಾತ್ರ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯ. ಜೊತೆಗೆ ಸತತ ಪ್ರಯತ್ನವೂ ಅಗತ್ಯ ಎಂದು ಅಂತರ ರಾಷ್ಟ್ರೀಯ ಪ್ಯಾರಾ ಈಜುಗಾರ ನಿರಂಜನ್ ಮುಕುಂದನ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಹಾಕಿ ಮಾಂತ್ರಿಕ ಮೇಜರ್ ಧ್ಯಾನ್‌ಚಂದ್ ಜನ್ಮ ದಿನದ ಅಂಗವಾಗಿ ಕೇಂದ್ರ ಸರ್ಕಾರದ ಕ್ರೀಡಾ ಮತ್ತು ಯುವಜನ ವ್ಯವಹಾರ ವಿಭಾಗ, ಭಾರತೀಯ ಕ್ರೀಡಾ ಪ್ರಾಧಿಕಾರದ ಘೋಷಣೆಯಂತೆ ಸೋಮವಾರ ನಗರದ ಶ್ರೀರಾಮಕೃಷ್ಣ ಆಶ್ರಮದಲ್ಲಿ ಆಯೋಜಿಸಿದ್ದ ‘ಮೀಟ್ ದಿ ಚಾಂಪಿಯನ್’ ವಿಶೇಷ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಮತೋಲನದ ಆಹಾರ, ಉನ್ನತವಾದ ಗುರಿಯನ್ನು ಕ್ರೀಡಾ ಕ್ಷೇತ್ರದಲ್ಲಿ ಇಟ್ಟುಕೊಳ್ಳುವ ಅಗತ್ಯವಿದೆ. ಅಲ್ಲದೇ ದಿನನಿತ್ಯದ ಸಾಧನೆ, ಪ್ರತಿಕೂಲ ಪರಿಸ್ಥಿತಿಯನ್ನು ಲೆಕ್ಕಿಸದೆ ಮುನ್ನುಗ್ಗುವ ಧೈರ್ಯ ಇರಬೇಕು. ಕಷ್ಟ ಬಂದಾಗ ಕುಗ್ಗದೆ, ಧೈರ್ಯದಿಂದ ಪ್ರಯತ್ನಶೀಲರಾಗವುದರ ಮೂಲಕ ನಿಮ್ಮ ಕ್ಷೇತ್ರದಲ್ಲಿ ಜಯಶಾಲಿಯಾಗಬಹುದು ಎಂದು ವಿದ್ಯಾರ್ಥಿಗಳಿಗೆ ಯಶಸ್ಸಿನ ಗುಟ್ಟು ಹೇಳಿದರು.
ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಸ್ವಾಮಿ ಮುಕ್ತಿದಾನಂದಾಜಿ, ವಿದ್ಯಾಶಾಲೆಯ ಮುಖ್ಯಸ್ಥರಾದ ಸ್ವಾಮಿ ಯುಕ್ತೇಶಾನಂದಾಜಿ, ಪ್ರಾಂಶುಪಾಲ ಎಸ್.ಬಾಲಾಜಿ, ಭಾರತೀಯ ಕ್ರೀಡಾ ಪ್ರಾಧಿಕಾರದ ಉಪನಿರ್ದೇಶಕರಾದ ಡಾ. ಮೋನಿಕಾ, ವಿದ್ಯಾಶಾಲೆಯ ದೈಹಿಕ ಶಿಕ್ಷಣ ನಿರ್ದೇಶಕರಾದ ಡಿ.ಸುದರ್ಶನ್, ಬಿ.ಆರ್.ರವಿ ಇತರರು ಇದ್ದರು.
ವಿದ್ಯಾಶಾಲೆಯ ಈಜುಕೊಳದಲ್ಲಿ ವಿದ್ಯಾರ್ಥಿಗಳು ವಿಶೇಷವಾದ ಈಜು ಕೌಶಲ್ಯ ಪ್ರದರ್ಶಿಸಿದರು. ಕ್ರೀಡೆ ಕುರಿತು ಪ್ರಧಾನಮಂತ್ರಿ ಸಂದೇಶವಿದ್ದ ವಿಡಿಯೋ ಪ್ರದರ್ಶಿಸಲಾಯಿತು. ಕ್ರೀಡೆಗೆ ಸಂಬಂಧಿಸಿದಂತೆ ಆಯೋಜಿಸಿದ್ದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ವಿಜೇತ ಐದು ವಿದ್ಯಾರ್ಥಿಗಳಿಗೆ ಒಲಂಪಿಕ್ ಜರ್ಸಿಯನ್ನು ಬಹುಮಾನವಾಗಿ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net