ಉನ್ನತ ಮಟ್ಟದ ಕೌಶಲ ಬೆಳೆಸಿಕೊಳ್ಳಿ

4 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಹಿಳೆಯರು ಕೌಶಲಗಳನ್ನು ಇನ್ನೂ ಉನ್ನತ ಮಟ್ಟಕ್ಕೆ ಬೆಳೆಸಿಕೊಳ್ಳಬೇಕು. ತರಬೇತಿಯಲ್ಲಿ ಪಡೆಯುವ ಕೌಶಲವನ್ನು ತರಬೇತಿಗೆ ಮಾತ್ರ ಸೀಮಿತಗೊಳಿಸದೆ ಜೀವನ ಮಟ್ಟ ಸುಧಾರಣೆಗೆ ಬೆಳೆಸಿಕೊಳ್ಳಬೇಕು ಎಂದು ಸಮಾಜ ಸೇವಕಿ ವರ್ಷ ಹಂಚಿನಮನಿ ಅಭಿಪ್ರಾಯಪಟ್ಟರು.
ನಗರದ ರ‌್ಯಾಪಿಡ್ ಹಾಗೂ ಯಶೋಧಾ ವೆಲ್ಫೇರ್ ಟ್ರಸ್ಟ್ ವತಿಯಿಂದ ವಿದ್ಯಾಗಿರಿಯಲ್ಲಿ ಗುರುವಾರ ಮಹಿಳೆಯರಿಗೆ ಏರ್ಪಡಿಸಿದ್ದ ಕ್ರೋಶ ವೈಯರ್‌ನಿಂದ ಅಲಂಕಾರಿಕ ವಸ್ತುಗಳ ತಯಾರಿಕಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಈ ಕಲೆ ಅರೇಬಿಯನ್ ರಾಷ್ಟ್ರಗಳಲ್ಲಿ ಹೆಚ್ಚು ಪ್ರಚಲಿತವಾಗಿತ್ತು. ನಂತರದಲ್ಲಿ ತನ್ನ ಗುಣಮಟ್ಟದ ಪ್ರಭಾವದಿಂದ ಇಡೀ ಜಗತ್ತಿಗೆ ಹರಡಿದೆ. ಅದರಲ್ಲಿ ಸ್ವಯಂ ಸೇವಾ ಸಂಸ್ಥೆಗಳು ಧಾರವಾಡದ ಮಹಿಳೆಯರಿಗೆ ಅವಕಾಶ ನೀಡುತ್ತಿರುವುದು ಸಂತೋಷದ ಸಂಗತಿ. ತರಬೇತಿಯಲ್ಲಿ ಸಿದ್ಧವಾದ ಪ್ರತಿ ವಸ್ತುಗಳು ಅಚ್ಚುಕಟ್ಟು ಹಾಗೂ ಆಕರ್ಷಕವಾಗಿದ್ದು, ತರಬೇತಿ ಗುಣಮಟ್ಟಕ್ಕೆ ಹಿಡಿದ ಕನ್ನಡಿಯಾಗಿದೆ ಎಂದರು.
ರಾಪಿಡ್ ಸಂಸ್ಥೆ ಸಿಇಒ ಮಾಳವಿಕಾ ಕಡಕೋಳ ಮಾತನಾಡಿ, ಈ ಕಲೆಯನ್ನು ಹವ್ಯಾಸಕ್ಕಾಗಿ ಕಲಿಯದೆ, ಮಹಿಳೆಯರು
ತಮ್ಮ ಆರ್ಥಿಕ ಕಾರ್ಯಕ್ರಮವನ್ನಾಗಿ ಪರಿಗಣಿಸಿದಲ್ಲಿ ಹೆಚ್ಚು ಸಾರ್ಥಕವಾಗಲಿದೆ ಎಂದರು.
ವಿ.ಕೆ. ಪರ್ವತಿ ಅಧ್ಯಕ್ಷತೆ ವಹಿಸಿದ್ದರು. ಮೂರು ದಿನಗಳ ಕಾಲ ನಡೆದ ಶಿಬಿರದಲ್ಲಿ ನಗರ ಹಾಗೂ ಗ್ರಾಮೀಣ ಭಾಗದ 20ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು. ರಾಖಿ, ಕೀ ಚೈನ್, ಫ್ರಂಡ್‌ಶಿಪ್ ಬ್ಯಾಂಡ್ ಸೇರಿ ವಿವಿಧ ವಸ್ತುಗಳನ್ನು ತಯಾರಿಸಲು ತರಬೇತಿ ನೀಡಲಾಯಿತು. ತರಬೇತುದಾರರಾಗಿ ಚೈತ್ರ ಕಾರ್ಯ ನಿರ್ವಹಿಸಿದರು.
ಯಶೋಧ ವೆಲ್ಫೇರ್ ಟ್ರಸ್ಟ್‌ನ ಆನಂದ ಅಗ್ನಿಹೋತ್ರಿ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net