ಉದ್ಯೋಗಾವಕಾಶಕ್ಕೆ ವಿಶೇಷ ಯೋಜನೆ

9CBP4
Published on

ಚಿಕ್ಕಬಳ್ಳಾಪುರ : ಕರೊನಾ ಸಂಕಷ್ಟದ ಪರಿಸ್ಥಿತಿಯಲ್ಲಿ ಆರ್ಥಿಕಾಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸಿ, ಪದವೀಧರರು ಸೇರಿ ವಿವಿಧ ವಲಯಗಳ ಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ.ಸುಧಾಕರ್ ತಿಳಿಸಿದರು.

ನಗರದ ಸಿದ್ದೇಶ್ವರ ಸಮುದಾಯ ಭವನದಲ್ಲಿ ಶುಕ್ರವಾರ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಸಭೆಯಲ್ಲಿ ಮಾತನಾಡಿದರು.ಕರೊನಾ ಸೋಂಕಿನಿಂದ ಬಹುತೇಕ ವಲಯಗಳಲ್ಲಿ ಹಲವು ಏರುಪೇರುಗಳು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಸೋಂಕಿನ ನಿಯಂತ್ರಣದ ಜತೆಗೆ ಆರ್ಥಿಕಾಭಿವದ್ಧಿಯ ಕಡೆಗೂ ಗಮನಹರಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಪದವೀಧರ ಮತದಾರ ಪಟ್ಟಿಯಲ್ಲಿ 16 ಸಾವಿರ ಮತದಾರರಿದ್ದು ಕಾರ್ಯಕರ್ತರು ಪ್ರತಿಯೊಬ್ಬ ಮತದಾರರನ್ನು ಭೇಟಿ ಮಾಡಿ, ಚುನಾವಣೆಯಲ್ಲಿ ಪಕ್ಷ ಬೆಂಬಲಿಸುವಂತೆ ಮಾಡಬೇಕು ಎಂದು ಸೂಚಿಸಿದರು.

ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ಉತ್ತಮ ಆಡಳಿತ ವೈಖರಿಗೆ ಪಕ್ಷದ ಪರ ಜನರ ಒಲವು ಹೆಚ್ಚಾಗಿದೆ. ಇದು ಪಕ್ಷದ ಬಲ ವೃದ್ಧಿಗೆ ಪ್ರಮುಖ ಕಾರಣವಾಗಿದ್ದು, ಕಾರ್ಯಕರ್ತರು ಪ್ರಬಲ ಸಂಘಟನೆ ಮೂಲಕ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳಲ್ಲಿ ಪಕ್ಷ ಗೆಲುವು ಸಾಧಿಸುವಂತಾಗಲು ಶ್ರಮಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ತಿಳಿಸಿದರು.

ಶಿಕ್ಷಕರು ಮತ್ತು ಪದವೀಧರರ ಸಮಸ್ಯೆಗಳ ಬಗ್ಗೆ ಈಗಾಗಲೇ ರಾಜ್ಯ ಸರ್ಕಾರದ ಗಮನ ಸೆಳೆಯಲಾಗಿದೆ. ಕಾಲಕಾಲಕ್ಕೆ ವೇತನ, ಭತ್ಯೆ, ವರ್ಗಾವಣೆ ಸೇರಿ ಹಲವು ಅಹವಾಲುಗಳನ್ನು ಆಲಿಸಲು ಶಿಕ್ಷಕ ಮಿತ್ರ ಆ್ಯಪ್‌ಗೆ ಚಾಲನೆ ನೀಡಲಾಗಿದೆ ಎಂದು ಅಭ್ಯರ್ಥಿ ಎಂ.ಚಿದಾನಂದಗೌಡ ಹೇಳಿದರು.

ಪಕ್ಷದ ವಿಭಾಗೀಯ ಸಂಘಟನಾ ಕಾರ್ಯದರ್ಶಿ ಕಾಂತರಾಜು, ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಮರಳುಕುಂಟೆ ಕೃಷ್ಣಮೂರ್ತಿ, ಮುರಳೀಧರ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಅಭಿಜಿತ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net