ಉದ್ಯೋಗಾವಕಾಶಕ್ಕೆ ಕ್ರೀಡಾ ಮೀಸಲು ಸದ್ಬಳಕೆಯಾಗಲಿ

mysore
Published on

ಮೈಸೂರು: ಕ್ರೀಡಾ ಚಟುವಟಿಕೆಯಲ್ಲಿ ಸಾಧನೆ ಮಾಡಿರುವವರಿಗೆ ಮೀಸಲಾತಿ ಇರುವುದರಿಂದ ಉದ್ಯೋಗಾವಕಾಶ ದೊರೆಯಲಿದೆ. ಇದನ್ನು ಯುವ ಕ್ರೀಡಾಪಟುಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ರಾಜ್ಯ ಸೈಕಲ್ ಪೋಲೊ ಅಸೋಸಿಯೇಷನ್ ಅಧ್ಯಕ್ಷ ಎನ್.ಆರ್.ಮಂಜುನಾಥ್ ಹೇಳಿದರು.

ಶಾಲಾ ಶಿಕ್ಷಣ ಇಲಾಖೆ, ರಾಜ್ಯ ಸೈಕಲ್ ಪೋಲೋ ಅಸೋಸಿಯೇಷನ್, ಮಹಾರಾಜ ಏಜುಕೇಷನ್ ಟ್ರಸ್ಟ್, ಗೋಪಾಲಸ್ವಾಮಿ ಶಿಕ್ಷಣ ಸಂಸ್ಥೆ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಸಹಯೋಗದಲ್ಲಿ ದೈಹಿಕ ಶಿಕ್ಷಕರಿಗಾಗಿ ಸೋಮವಾರ ಆಯೋಜಿಸಿದ್ದ ‘ಸೈಕಲ್ ಪೋಲೊ, ಜಿಮ್ನಾಸ್ಟಿಕ್, ಕತ್ತಿವರಸೆ ಹಾಗೂ ಯೋಗ ಕುರಿತ ಜಿಲ್ಲಾ ಮಟ್ಟದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಹಿಂದೆ ಕುದುರೆ(ಹಾರ್ಸ್) ಪೋಲೊ ಎಂದು ಇದ್ದ ಕ್ರೀಡೆಯನ್ನು ಇದೀಗ ಸೈಕಲ್ ಪೋಲೊ ಎಂದು ಪರಿವರ್ತಿಸಲಾಗಿದೆ. ಹಿಂದೆ ಕುದುರೆ ಮೇಲೆ ಸವಾರಿ ಮಾಡುತ್ತಾ ಪೋಲೊ ಆಡುತ್ತಿದ್ದರು.

ಆದರೆ ಕುದುರೆ ಖರೀದಿಗೆ ಹೆಚ್ಚು ಹಣ ಬೇಕಾಗುವುದರಿಂದ ಆ ಕ್ರೀಡೆ ಶ್ರೀಮಂತ ಕ್ರೀಡೆ ಎನಿಸಿತ್ತು. ಕೆಲ ಹಿರಿಯ ಪಟುಗಳು ಸೇರಿ ಕುದುರೆಗೆ ಪರ್ಯಾಯವಾಗಿ ಸೈಕಲ್ ಬಳಸಿ ಪೋಲೊ ಆಡುವುದಕ್ಕೆ ನಿರ್ಧರಿಸಿದರು. ಇದರಿಂದಾಗಿ ಬಡವರೂ ಹಾಗೂ ಗ್ರಾಮೀಣ ಪ್ರದೇಶದ ಮಕ್ಕಳಿಗೂ ಸೈಕಲ್ ಪೋಲೊ ಆಡುವ ಅವಕಾಶ ಸಿಕ್ಕಿದೆ ಎಂದರು.

ಈಗ ಸೈಕಲ್ ಪೋಲೊ ಕ್ರೀಡೆಗೆ ಒಲವು ಹೆಚ್ಚಾಗುತ್ತಿದೆ. ಈಗಾಗಲೇ ಭಾರತೀಯ ಸೇನೆ, ನೌಕಾದಳ, ವಾಯುದಳದಲ್ಲಿ ಸೈಕಲ್ ಪೋಲೊ ತಂಡಗಳಿವೆ. ಮುಂದಿನ ದಿನಗಳಲ್ಲಿ ರೈಲ್ವೆ ಹಾಗೂ ಜಿಲ್ಲಾ ಮತ್ತು ರಾಜ್ಯ ಮಟ್ಟದ ಪೊಲೀಸ್ ತಂಡಗಳು ರಚನೆಯಾಗಲಿವೆ. ಈ ಹಿನ್ನೆಲೆಯಲ್ಲಿ ಇಂದಿನ ತರಬೇತಿ ಕಾರ್ಯಾಗಾರ ಮಹತ್ವ ಪಡೆದುಕೊಂಡಿದೆ ಎಂದು ತಿಳಿಸಿದರು.

ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಟಿ.ಜವರೇಗೌಡ ಮಾತನಾಡಿ, ಶಾಲೆಗಳಲ್ಲೂ 2025-26ನೇ ಸಾಲಿನಿಂದಲೇ ಜಾರಿಗೆ ಬರುವಂತೆ ಸೈಕಲ್ ಪೋಲೊ, ಕತ್ತಿವರಸೆ, ಯೋಗ ಹಾಗೂ ಜಿಮ್ನಾಸ್ಟಿಕ್ ತಂಡವನ್ನು ರಚಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಜಿಮ್ನಾಸ್ಟಿಕ್‌ಗೆ ಪೂರಕವಾದ ವಾತಾವರಣ ಇದೆಯೇ ಎಂಬುದನ್ನು ಅವಲೋಕಿಸಬೇಕು. ಜತೆಗೆ ಉದಯೋನ್ಮುಖ ಕ್ರೀಡಾಪಟುಗಳ ಬೆಳೆಸುವಲ್ಲಿ ದೈಹಿಕ ಶಿಕ್ಷಣ ಶಿಕ್ಷಕರು ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದರು.

ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲೆ ಗೀತಾಂಬ ಮಾತನಾಡಿ, ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಶಿಕ್ಷಣ ಅಗತ್ಯ. ಆದ್ದರಿಂದ ದೈಹಿಕ ಶಿಕ್ಷಣಕ್ಕೆ ಒತ್ತು ನೀಡಬೇಕಾದ ಅನಿವಾರ್ಯತೆ ಇದೆ ಎಂದರು.

ದೈಹಿಕ ಶಿಕ್ಷಣದಲ್ಲಿ ವಿವಿಧ ಕ್ರೀಡೆಗಳಲ್ಲಿ ಮಕ್ಕಳನ್ನು ತೊಡಗಿಸಿಕೊಂಡಾಗ ವಿವಿಧ ಮಟ್ಟದಲ್ಲಿ ತರಬೇತಿ ಪಡೆದ ಮಕ್ಕಳು ಸಾಧನೆ ಮಾಡಬಹುದಾಗಿದೆ. ನಿರ್ದಿಷ್ಟ ಕ್ರೀಡೆಯಲ್ಲಿ ಹೆಚ್ಚಿನ ಪರಿಣಿತಿ ಹೊಂದಿದ ಮಕ್ಕಳು ಮುಂದಿನ ದಿನಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಲೂ ಬಹುದು. ಈ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ದೈಹಿಕ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಮಹಾತ್ಮಗಾಂಧಿ ಅವರು ಈ ಹಿಂದೆಯೇ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಶಿಕ್ಷಣ ಅಗತ್ಯ ಎಂದಿದ್ದಾರೆ. ದೈಹಿಕ ಶಿಕ್ಷಣ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡಲಿದೆ.

ದೈಹಿಕ ಶಿಕ್ಷಣ ಶಿಕ್ಷಕರಿಗೆ ಸೈಕಲ್ ಪೋಲೊ, ಕತ್ತಿವರಸೆ, ಜಿಮ್ನಾಸ್ಟಿಕ್ ಹಾಗೂ ಯೋಗಕ್ಕೆ ಸಂಬಂಧಿಸಿದಂತೆ ತರಬೇತಿ ನೀಡಲಾಗುತ್ತಿದೆ. ಇಲ್ಲಿ ಕಲಿತದ್ದನ್ನು ದೈಹಿಕ ಶಿಕ್ಷಕರು ತಮ್ಮ ಶಾಲೆಗಳಲ್ಲಿ ಮಕ್ಕಳಿಗೆ ಕಲಿಸಬೇಕು. ತಮ್ಮ ಶಾಲೆಯಲ್ಲಿನ ಇತಿಮಿತಿಯೊಳಗೆ ಲಭ್ಯವಿರುವ ಅನುದಾನ, ಆಟದ ಮೈದಾನ ಬಳಸಿಕೊಂಡು ಕ್ರೀಡಾ ಚಟುವಟಿಕೆಯಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.

ಬಿಇಒಗಳಾದ ರಾಜು, ರೇವಣ್ಣ, ಪ್ರಕಾಶ್, ಶಿವಮೂರ್ತಿ, ಮಹೇಶ್, ರವಿಪ್ರಸನ್ನ, ಬಿಆರ್‌ಸಿ ಶ್ರೀಕಂಠಸ್ವಾಮಿ, ತಾಲೂಕು ಪರಿವೀಕ್ಷಕರಾದ ಯೋಗಾನಂದ, ಕೆ.ಮರಿಸ್ವಾಮಿ, ನಾಗೇಶ್, ಮೂರ್ತಿ ನಾಯಕ್, ಎಂ.ಬಿ.ಕುಮಾರಸ್ವಾಮಿ, ಪ್ರಭುಸ್ವಾಮಿ, ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net