

ಚಿಕ್ಕಬಳ್ಳಾಪುರ : ವಿದ್ಯಾರ್ಥಿಗಳಲ್ಲಿನ ಉದ್ಯೋಗಾಧಾರಿತ ಕೌಶಲಾಭಿವೃದ್ಧಿ ಕೊರತೆ ನೀಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ವಿಶ್ವೇಶ್ವರಯ್ಯ ಅಂತಾರಾಷ್ಟ್ರೀಯ ಸೂಪರ್ ಟ್ರೈನರ್ ಸಂಸ್ಥೆಯ ನಿರ್ದೇಶಕ ಶ್ರೀನಿವಾಸ್ ರಾವ್ ಕುಲಕರ್ಣಿ ತಿಳಿಸಿದರು.
ತಾಲೂಕಿನ ಮುದ್ದೇನಹಳ್ಳಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಇಂಜಿನಿಯರ್ ಯೋಜಿತ ನಿರ್ವಹಣೆಯ ಪ್ರಥಮ ಹಂತದ ಮಾಸ್ಟರ್ ತರಬೇತಿಯಲ್ಲಿ ಮಾತನಾಡಿದರು.ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಕೆ ಜತೆಗೆ ಉತ್ತಮ ಕೌಶಲ, ಕ್ರಿಯಾಶೀಲತೆಯ ಪ್ರತಿಭೆ ಹೊಂದಿದ್ದಾಗ ಮಾತ್ರ ಉದ್ಯೋಗಾವಕಾಶಗಳು ದೊರೆಯುತ್ತವೆ. ಆದರೆ, ಶಿಕ್ಷಣ ಮುಗಿಸಿ ಹೊರಬರುತ್ತಿರುವ ವಿದ್ಯಾರ್ಥಿಗಳು ಕೆಲ ಕಾರಣಗಳಿಂದ ಈ ನಿಟ್ಟಿನಲ್ಲಿ ವಿಫಲರಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ವಿಶ್ವೇಶ್ವರಯ್ಯ ಅಂತಾರಾಷ್ಟ್ರೀಯ ಸೂಪರ್ ಟ್ರೈನರ್ ಸಂಸ್ಥೆ 2011 ರಿಂದ ಕಾರ್ಯನಿರ್ವಹಿಸುತ್ತಿದ್ದು ಸರ್ಕಾರದ ಮುಖ್ಯ ಕಾರ್ಯದರ್ಶಿ ಆಡಳಿತ ಮಂಡಳಿ ಅಧ್ಯಕ್ಷರಾಗಿದ್ದಾರೆ. ಮೊದಲು ಕಾರ್ಮಿಕ ಇಲಾಖೆ ಅಧೀನದಲ್ಲಿದ್ದ ಸಂಸ್ಥೆ ಈಗ, ರಾಜ್ಯ ವ್ಯವಹಾರ ಹಂಚಿಕೆ ನಿಯಮಗಳ 1977 ರ ಕೌಶಲಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿದೆ ಎಂದು ವಿವರಿಸಿದರು.
ನಿವೃತ್ತ ಐಎಎಸ್ ಅಧಿಕಾರಿ ಅನ್ವರ್ ಪಾಷಾ, ಜಿಲ್ಲಾ ಉದ್ಯೋಗಾಧಿಕಾರಿ ಎಂ.ಪ್ರಸಾದ್, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಂಯೋಜಕ ಡಾ.ಚಿಕ್ಕಣ್ಣ, ನಾಗಾರ್ಜುನ ಇಂಜಿನಿಯರಿಂಗ್ ಕಾಲೇಜು ಪ್ರೊಫೆಸರ್ ವೆಂಕಟೇಶ್ ಬಾಬು, ಕೌಶಲಾಭಿವೃದ್ದಿ ಉದ್ಯಮಶೀಲತೆ ಜೀವನೋಪಾಯ ಇಲಾಖೆ ಉಪ ಕಾರ್ಯದರ್ಶಿ ಸಿದ್ದಿಕಿಪಾಷ, ಕಾರ್ನಿಕ್ ಸಂಸ್ಥೆಯ ಉಪನಿರ್ದೇಶಕ ಎಸ್.ಟಿ. ಕುಮಾರ್ ಇತರರಿದ್ದರು.
ಅಂಗಟ್ಟದಲ್ಲಿ 10 ಎಕರೆ ಜಮೀನು : ವಿಶ್ವೇಶ್ವರಯ್ಯ ಅಂತಾರಾಷ್ಟ್ರೀಯ ಸೂಪರ್ ಟ್ರೈನರ್ ಸಂಸ್ಥೆಗೆ ಚಿಕ್ಕಬಳ್ಳಾಪುರ ತಾಲೂಕಿನ ಅಂಗಟ್ಟದಲ್ಲಿ ಬಳಿ 10 ಎಕರೆ ಜಮೀನು ಮಂಜೂರು ಮಾಡಲಾಗಿದ್ದು, ಕಟ್ಟಡ ನಿರ್ಮಾಣಕ್ಕೆ ಆಡಳಿತಾತ್ಮಕ ಮಂಜೂರಾತಿ ಸಹ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದರು. ಮಾಸ್ಟರ್ ತರಬೇತಿದಾರರಿಗೆ ಹೊರದೇಶದ ಸೂಪರ್ ಟ್ರ್ತ್ರೈನರ್‌ಗಳನ್ನು ಆಹ್ವಾನಿಸಿ ನಮ್ಮ ಇಂಜಿನಿಯರ್‌ಗಳಲ್ಲಿ ಕೌಶಲ ಹೆಚ್ಚಿಸುವುದು ಇಲ್ಲಿನ ವಿಶ್ವೇಶ್ವರಯ್ಯ ಅಂತರಾಷ್ಟ್ರೀಯ ಸೂಪರ್ ಟ್ರ್ತ್ರೈನರ್ (ಒಗಿಅಖಿಒಖಿಆ) ಸಂಸ್ಥೆಯ ಗುರಿಯಾಗಿದೆ ಎಂದರು.
ಸೂಪರ್ ಟ್ರೈನರ್‌ಗಳಾಗಿ: ಮಾಸ್ಟರ್ ಟ್ರೈನರ್‌ಗಳಿಂದ ಸೂಪರ್ ಟ್ರೈನರ್‌ಗಳಾಗಿ ರೂಪುಗೊಳ್ಳಬೇಕು. ಆಗ ಬೇಡಿಕೆ ಹೆಚ್ಚಾಗುತ್ತದೆ. ಹೊರ ದೇಶಗಳಿಂದ ತರಬೇತುದಾರರು ಇಲ್ಲಿನ ಸಂಸ್ಥೆಗೆ ಬಂದು ಮಾರ್ಗದರ್ಶನ ನೀಡುತ್ತಿರುವುದು ಶ್ಲಾಘನೀಯ,
ಇಲ್ಲಿನ ಮಾಸ್ಟರ್ ತರಬೇತಿ ಸಂಸ್ಥೆಯು ಉತ್ತಮ ಕಾರ್ಯ ನಿರ್ವಹಣೆಯ ಮೂಲಕ ಭಾರತದಲ್ಲಿಯೇ ಪ್ರಥಮ ಉನ್ನತ ತರಬೇತಿ ಕೇಂದ್ರವಾಗಬೇಕು. ಇಲ್ಲಿನ ಎಂಜಿನಿಯರ್‌ಗಳು ನುರಿತ ತಜ್ಞರು ಸಲಹೆ, ಸೂಚನೆಗಳನ್ನು ಅರಿತುಕೊಂಡು ಹೊಸ ಚಿಂತನೆ ಮತ್ತು ಯೋಜನೆಯ ಮೂಲಕ ಗುರಿ ಸಾಧಿಸಬೇಕು ಎಂದು ಜಿಲ್ಲಾಧಿಕಾರಿ ಆರ್.ಲತಾ ಆಶಿಸಿದರು.