ಉದ್ಯೋಗದಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಿ

13ark2
ಅರಕಲಗೂಡಿನಲ್ಲಿ ಸೋಮವಾರ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಆರ್.ಕೆ. ಪದ್ಮನಾಭ ಅವರನ್ನು ಮೆರವಣಿಗೆ ಮಾಡಲಾಯಿತು.
Published on

ಅರಕಲಗೂಡು: ದೇಶದಲ್ಲಿ ಹಿಂದಿ ಹೇರಿಕೆ ಪ್ರವೃತ್ತಿಗೆ ಸಂಪೂರ್ಣವಾಗಿ ಕಡಿವಾಣ ಹಾಕಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕನ್ನಡ ಮಾಧ್ಯಮದವರಿಗೆ ಉದ್ಯೋಗ ಕಲ್ಪಿಸಲು ಹೆಚ್ಚು ಆದ್ಯತೆ ನೀಡುವ ಮೂಲಕ ಕನ್ನಡಿಗರ ಬದುಕು ಗಟ್ಟಿಗೊಳಿಸುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು 21ನೇ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ, ವಿದ್ವಾಂಸ ಆರ್.ಕೆ. ಪದ್ಮನಾಭ ಪ್ರತಿಪಾದಿಸಿದರು.

ಪಟ್ಟಣದ ಕ್ರೀಡಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ 21ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷರ ನುಡಿಗಳನ್ನಾಡಿದ ಅವರು, ಆಂಗ್ಲ ಮಾಧ್ಯಮದಲ್ಲಿ ಓದಿದರೆ ಬುದ್ಧವಂತರಾಗುತ್ತೇವೆ ಎನ್ನುವುದು ಮೂರ್ಖತನ. ಆಂಗ್ಲ ಮಾಧ್ಯದ ದಾಸರಾಗಿದ್ದು ಈಗಾಗಲೇ ಹಲವಾರು ಕನ್ನಡ ಶಾಲೆಗಳು ಮುಚ್ಚಿವೆ. ಸರ್ಕಾರಗಳು ಭದ್ರವಾದ ಶಿಕ್ಷಣ ಸಿದ್ಧಾಂತಕ್ಕೆ ಬದ್ಧವಾಗಿರಬೇಕು. ಆದರೆ ರಾಜ್ಯದಲ್ಲಿ ಆಳುವ ಸರ್ಕಾರಗಳು ಈ ವಿಚಾರದಲ್ಲಿ ದಿಟ್ಟ ನಿಲುವು ತಳೆಯದೆ ಜಾರಿಕೊಳ್ಳುತ್ತಿವೆ. ಹೀಗಾಗಿ ಜನರೇ ಜಾಗೃತರಾಗಿ ಕನ್ನಡ ಶಾಲೆಗಳ ಉಳಿವಿಗೆ ಮುಂದಾಗಬೇಕು ಎಂದರು.

ಆಂಗ್ಲ ಮಾಧ್ಯಮದ ಮೌಢ್ಯತೆ ತೊಡೆದು ಮಕ್ಕಳಿಗೆ ಕನ್ನಡದಲ್ಲಿ ಪ್ರಾಥಮಿಕ ಶಿಕ್ಷಣ ಕೊಡಿಸದಿದ್ದರೆ ಇನ್ನು 25 ವರ್ಷದೊಳಗೆ ಕನ್ನಡ ಶಾಲೆಗಳೆಲ್ಲ ಕಣ್ಮುಚ್ಚುವುದರಲ್ಲಿ ಸಂದೇಹವಿಲ್ಲ. ಸರ್ಕಾರ ಇದಕ್ಕೆ ಕಟ್ಟುನಿಟ್ಟಿನ ಪರಿಹಾರ ಕಂಡುಕೊಳ್ಳುವ ಜತೆಗೆ ಕನ್ನಡಿಗರು ಜಾಗೃತರಾಗುವುದು ಅನಿವಾರ್ಯವಾಗಿದೆ ಎಂದು ಪ್ರತಿಪಾದಿಸಿದರು.
ಕನ್ನಡ ಸುಭದ್ರವಾಗಿದ್ದರೆ ಎಲ್ಲ ಭಾಷೆೆಗಳು ಸುಲಲಿತವಾಗಿರುತ್ತವೆ. ಆದರೆ ಕನ್ನಡವನ್ನು ಗಂಭೀರವಾಗಿ ತೆಗೆದುಕೊಳ್ಳುವ ಸ್ಥಿತಿ ಬಂದಿರುವುದು ತರವಲ್ಲ. ಕನ್ನಡದಲ್ಲಿ ಒಳ್ಳೆಯ ಸಂಸ್ಕಾರ ಕೊಡಬಹುದು. ಭಾಷೆ ಬೆಳೆಯಲು ಸಾಹಿತ್ಯದ ಜತೆಗೆ ಸಂಗೀತ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರಾಧ್ಯಾನತೆ ನೀಡಬೇಕು. ಎಲ್ಲ ಶಾಲೆಗಳಲ್ಲೂ ಕನ್ನಡ ಕಲಿಕೆ ಕಡ್ಡಾಯವಾಗಬೇಕು. ಸರ್ಕಾರಿ ಶಾಲೆಗಳಿಗೆ ವಿಶೇಷ ಸವಲತ್ತು ಒದಗಿಸಬೇಕು. ಜನಪದ ಕಲೆ ಮತ್ತು ಸಂಸ್ಕೃತಿ ಅಭಿವೃದ್ಧಿಗೆ ಮತ್ತಷ್ಟು ಉತ್ತೇಜನ ನೀಡಬೇಕು ಎಂದರು.

ಅನಕೃ ನೆಲ ಅರಕಲಗೂಡು ಸಾಂಸ್ಕೃತಿಕ ನಗರಿಯಾಗಿ ಪರಿವರ್ತನೆಯಾಗಿ ಸಮಗ್ರ ಸಾಹಿತ್ಯ ದರ್ಶನ ಆಗಬೇಕು. ಅನಕೃ ಮನೆ ಉಳಿಸಲಾಗಲಿಲ್ಲ. ಅನಕೃ ಹೆಸರು ಉಳಿಸುವ ಕಾರ್ಯವಾಗಬೇಕು ಎಂದು ಹೇಳಿದರು.

ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ. ಹಂಪನಹಳ್ಳಿ ತಿಮ್ಮೇಗೌಡ ಮಾತನಾಡಿ, ಪ್ರಸ್ತುತ ಸಮಾಜದಲ್ಲಿ ಜಾತಿ ಧರ್ಮಗಳ ನಡುವೆ ಅಸಹನೆ ಹುಟ್ಟುತ್ತಿದ್ದು ಸಾಹಿತಿಯನ್ನು ಅನುಮಾನದಿಂದ ಕಾಣುವ ಕಾಲ ಬಂದಿದೆ. ಚರಿತ್ರೆಯನ್ನು ತಿರುಚಿದರೆ ಸಾಹಿತ್ಯಕ್ಕೆ ಅಪಮಾನ. ಸಾಹಿತಿಗಳು ಈ ನಿಟ್ಟಿನಲ್ಲಿ ಎಚ್ಚರ ವಹಿಸಬೇಕು. ಸಾಹಿತ್ಯದಿಂದ ಸಮಾಜ ಬದಲಾವಣೆಯಾಗಿ ಸೌಹಾರ್ದ ವಾತಾವರಣ ಮೂಡಬೇಕು ಎಂದರು.

ಕನ್ನಡಕ್ಕೆ ಒಳ್ಳೆಯ ಸ್ಥಾನಮಾನ ದೊರೆತು ಕನ್ನಡಿಗರ ಬದುಕು ಗಟ್ಟಿಯಾಗಬೇಕು. ತಮಿಳು ಭಾಷೆೆಗೆ ತಮಿಳುನಾಡು ಸರ್ಕಾರ ನೀಡಿರುವಂತೆ ಕನ್ನಡಕ್ಕೆ ಸರ್ಕಾರ ಸ್ವಾಯತ್ತೆ ನೀಡಬೇಕು ಎಂದು ಒತ್ತಾಯಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್ ಮಾತನಾಡಿ, ಭಾಷೆ ಆತ್ಮದ ಅಭಿವ್ಯಕ್ತಿಯಾಗಿದ್ದು, ಇದನ್ನು ಜತನವಾಗಿ ಕಾಪಾಡಿಕೊಳ್ಳದಿದ್ದರೆ ನಮ್ಮ ಸಂಸ್ಕೃತಿಯೇ ಮರೆಯಾಗಿ ಹೋಗುತ್ತದೆ. ಇಂತಹ ಸಮ್ಮೇಳನಗಳು ಜಾತ್ರೆಯಾದರೂ ಭಾಷೆೆಯ ಕುರಿತು ಜಾಗೃತಿ ಮೂಡಿಸಲು ಅತ್ಯವಶ್ಯಕವಾಗಿವೆ. ಕನ್ನಡ ನಾಡು ಹಾಗೂ ಕನ್ನಡಿಗರು ಯಾವ ಕ್ಷೇತ್ರದಲ್ಲೂ ಹಿಂದೆ ಬಿದ್ದಿಲ್ಲ. ಸಂಗೀತ, ರಂಗಭೂಮಿ, ಕ್ರೀಡೆ, ಆಡಳಿತ ಹೀಗೆ ಪ್ರತಿ ಕ್ಷೇತ್ರಗಳಲ್ಲಿ ವಿಶ್ವಮಟ್ಟದಲ್ಲಿ ಗುರುತಿಸುವಂತಹ ಕಾರ್ಯ ನಡೆಸಿರುವುದು ಕನ್ನಡದ ವಿಸ್ಮಯಗಳಲ್ಲಿ ಒಂದು ಎಂದರು.

ಸಮ್ಮೇಳನಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಆಯೋಜಿಸಬೇಕೆನ್ನುವ ಆಶಯ ಉತ್ತಮ ಸಲಹೆ. ಆದರೆ ಇದಕ್ಕೆ ಅನೇಕ ಅಡ್ಡಿ ಆತಂಕಗಳಿವೆ, ನಮ್ಮ ಹಳ್ಳಿಗಳು ಹಳ್ಳಿಗಳಾಗಿ ಉಳಿದಿಲ್ಲ, ನಗರಗಳಲ್ಲಿ ತಲ್ಲಣಗಳು ಮರುಕಳಿಸುತ್ತಿದ್ದರೆ ಹಳ್ಳಿಗಳನ್ನು ಅನೇಕ ಕುರೂಪ-ವಿರೂಪಗಳು ಆವರಿಸಿವೆ. ಇದರ ಹಿಂದಿನ ಸದಾಶಯ ಮೌಲ್ಯಗಳನ್ನು ಅನುಷ್ಠಾನಗೊಳಿಸಬೇಕು ಎಂದರು.

ಅನಕೃ ವೇದಿಕೆ ಉದ್ಘಾಟನೆ ಮಾಡಿದ ಖ್ಯಾತಿ ವಾಗ್ಮಿ ಹಿರೇಮಗಳೂರು ಕಣ್ಣನ್ ಮಾತನಾಡಿ, ಸಂಗೀತ ಸಾಹಿತ್ಯದ ಸಮ್ಮಿಲನ ಈ ಸಮ್ಮೇಳನ. ಕಾದಂಬರಿ ಸಾರ್ವಭೌಮ ಅನಕೃ ತವರಿನಲ್ಲಿ ಇಂತಹ ಸಮ್ಮಿಲನ ನಡೆಯಿತ್ತಿರುವುದು ಸಂತಸ ತಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಸಕ ಎ.ಟಿ. ರಾಮಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಎಚ್.ಎಲ್. ಮಲ್ಲೇಶಗೌಡ ಆಶಯ ನುಡಿಗಳನ್ನಾಡಿದರು. ಪಪಂ ಅಧ್ಯಕ್ಷೆ ಶಾರದಾಪೃಥ್ವಿರಾಜ್, ಉಪಾಧ್ಯಕ್ಷೆ ರಶ್ಮಿ, ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ್, ಬಿಇಒ ದೇವರಾಜು, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೃಷ್ಣೇಗೌಡ, ಕಾರ್ಯದರ್ಶಿ ಶಿವಸ್ವಾಮಿ, ಉದ್ಯಮಿ ಸಿ.ಕೆ. ಮೂರ್ತಿ, ಕಳ್ಳಿಮುದ್ದನಹಳ್ಳಿ ಲೋಕೇಶ್, ಚನ್ನೇಶವೇಗೌಡ, ಎಚ್.ಎಸ್. ಶಂಕರ್, ನಂಜುಂಡಸ್ವಾಮಿ, ನಾಯಕರಹಳ್ಳಿ ಮಂಜೇಗೌಡ, ತಾಲೂಕು ರೈತ ಸಂಘದ ಅಧ್ಯಕ್ಷ ಯೋಗಣ್ಣ ಇತರರಿದ್ದರು.

ಪುಸ್ತಕ ಮಳಿಗೆ ಸೇರಿದಂತೆ ವಿವಿಧ ಕಲಾಕೃತಿಗಳ ಮಳಿಗೆಗಳನ್ನು ತೆರೆಯಲಾಗಿತ್ತು. ಸಾಹಿತ್ಯಾಭಿಮಾನಿಗಳು ಕಲಾಸಕ್ತರು ವೀಕ್ಷಿಸಿ ಸಂಭ್ರಮಿಸಿದರು. ಮಧ್ಯಾಹ್ನದ ಊಟಕ್ಕೆ ಪಲಾವ್, ಮೊಸರನ್ನ, ಬಜ್ಜಿ, ಜಿಲೇಬಿ ಬಡಿಸಲಾಯಿತು. ಗಣಪತಿ ಕೊತ್ತಲು ಆವರಣದಲ್ಲಿ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಶಾಸಕ ಎ.ಟಿ. ರಾಮಸ್ವಾಮಿ ಚಾಲನೆ ನೀಡಿದರು. ಪ್ರಮುಖ ಬೀದಿಗಳಲ್ಲಿ ನಡೆದ ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳೊಂದಿಗೆ ಭಾಗವಹಿಸಿ ಮೆರಗು ನೀಡಿದವು. ಮೆರವಣಿಗೆಯಲ್ಲಿ ವಿದೇಶಿ ಮಹಿಳೆಯರು ಕನ್ನಡ ಬಾವುಟ ಹಿಡಿದು ನೃತ್ಯ ಪ್ರದರ್ಶಿಸಿ ಗಮನ ಸೆಳೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net