

ಚಿತ್ರದುರ್ಗ: ವೈವಾಹಿಕ ಜಾಲತಾಣವೊಂದರಲ್ಲಿ ತನ್ನ ನಕಲಿ ಪ್ರೊಫೈಲ್ ಮೂಲಕ ದುಷ್ಕರ್ಮಿಯೊಬ್ಬ ಯುವತಿಯೊಬ್ಬಳಿಗೆ ಲಕ್ಷಾಂತರ ರೂ. ವಂಚಿಸಿರುವ ಘಟನೆ ನಡೆದಿದೆ.
2-3 ತಿಂಗಳ ಹಿಂದೆ ಮೈಸೂರಿನಲ್ಲಿ ರೈಲ್ವೆ ಇಂಜಿನಿಯರ್ ಆಗಿದ್ದೇನೆ ಎಂದು ಹೇಳಿಕೊಂಡು ವಂಚಕ ಪ್ರೊಫೈಲ್ ಹಾಕುವ ಮೂಲಕ ಚಿತ್ರದುರ್ಗ ಜಿಲ್ಲೆಯ ಯುವತಿ ಹಾಗೂ ಆಕೆಯ ಪಾಲಕರನ್ನು ಸಂಪರ್ಕಿಸಿದ್ದಾನೆ. ನಂತರದಲ್ಲಿ ಹುಡುಗಿಗೆ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ 7.77 ಲಕ್ಷ ರೂ.ವಂಚಿಸಿದ್ದಾನೆ.
ಪ್ರಕರಣ ದಾಖಲಿಸಿಕೊಂಡಿರುವ ಸಿಇಎನ್ ಠಾಣೆ ಪೊಲೀಸರು ತನಿಖೆ ನಡೆಸಿದ್ದಾರೆ.
ಪ್ರಸಿದ್ಧ ವೈವಾಹಿಕ ವೆಬ್‌ಸೈಟ್‌ಗಳಲ್ಲಿ ನಕಲಿ ಪ್ರೊಫೈಲ್‌ಗಳನ್ನು ಹಾಕಿರುವಂಥವರು ತಮ್ಮನ್ನು ವಧು ಅಥವಾ ವರನ ಕಡೆಯವರು ಸಂಪರ್ಕಿಸಿದರೆ ಅವರೊಂದಿಗೆ ಆತ್ಮೀಯವಾಗಿ ಮಾತನಾಡುತ್ತಾರೆ. ತಮಗೆ ಅಥವಾ ಸಂಬಂಧಿಕರಿಗೆ ನೌಕರಿ ಕೊಡಿಸುವುದಾಗಿ ಆಕರ್ಷಕವಾಗಿ ಮಾತನಾಡಿ, ವಿವಿಧ ಖಾತೆಗಳಿಗೆ ಹಣ ಹಾಕಿಸಿಕೊಂಡು ಲಕ್ಷಾಂತರ ರೂ. ವಂಚಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ ಎಂದು ಎಸ್‌ಪಿ ರಂಜಿತ್‌ಕುಮಾರ್ ಬಂಡಾರು ತಿಳಿಸಿದ್ದಾರೆ.
ವೈವಾಹಿಕ ಜಾಲತಾಣಗಳಲ್ಲಿ ಇರಬಹುದಾದ ನಕಲಿ ಪ್ರೊಫೈಲ್‌ಗಳ ಬಗ್ಗೆ ಎಚ್ಚರ ವಹಿಸಬೇಕು. ವಧು, ವರರ ಆಯ್ಕೆಗೆ ವೆಬ್‌ಸೈಟ್‌ನಂಥ ತಂತ್ರಜ್ಞಾನ ಬಳಸಿಕೊಂಡರೂ ಮನೆ, ಕೆಲಸದ ಸ್ಥಳದಲ್ಲಿ ಭೇಟಿ, ಸಂಬಂಧಿಕರು, ಸ್ನೇಹಿತರನ್ನು ವಿಚಾರಿಸುವುದು ಇತ್ಯಾದಿ ಸಾಂಪ್ರದಾಯಕ ವಿಧಾನಗಳ ಮೂಲಕ ವಧು ಅಥವಾ ವರನ ಪೂರ್ವಪರ ತಿಳಿದು ಮುಂದುವರಿಯಬೇಕು.ಅನಾಮಧೇಯ ವ್ಯಕ್ತಿಗೆ ವೈಯಕ್ತಿಕ ಮಾಹಿತಿ ಕೊಡುವುದು, ಹಣ ಪಡೆದು ಉದ್ಯೋಗ ಕೊಡಿಸುವ ಮಾತುಗಳಿಗೆ ಮರಳಾಗಬಾರದು. ಪ್ರೊಫೈಲ್ ನಕಲಿ ಎಂದಾದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡುವಂತೆ ಎಸ್‌ಪಿ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.