

ಚಿತ್ರದುರ್ಗ: ಸರ್ಕಾರಿ ಉದ್ಯೋಗಕ್ಕಾಗಿ ಎಲ್ಲರೂ ಕಾಯಬೇಕಿಲ್ಲ. ವಿಶಾಲವಾದ ಭಾರತ ದೇಶದಲ್ಲಿ ಎಲ್ಲಿ ಬೇಕಾದರೂ ಸ್ವಯಂ ಉದ್ಯೋಗ ಕೈಗೊಂಡು ಪ್ರಗತಿ ಹೊಂದಬಹುದು. ಕಷ್ಟಪಟ್ಟರೆ ಫಲ ಖಂಡಿತ ಎಂದು ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಸಲಹೆ ನೀಡಿದರು.
ದೇವರಾಜ್ ಅರಸು ಶಿಕ್ಷಣ ಸಂಸ್ಥೆಯಲ್ಲಿ ಸೋಮವಾರ ನಡೆದ ಪದವಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಾರಾಯಣಮೂರ್ತಿ ಅವರಿಗೆ ಆರಂಭದಲ್ಲೇ ಯಶಸ್ಸು ಸಿಗಲಿಲ್ಲ. ಆದರೂ ಛಲ ಬಿಡಲಿಲ್ಲ. ಹೀಗಾಗಿ ಇನ್ಫೋಸಿಸ್ ಇಡೀ ಭಾರತದಲ್ಲೇ ಅತ್ಯುತ್ತಮ ಸಂಸ್ಥೆಯಾಗಿ ಹೊರಹೊಮ್ಮಲು ಸಾಧ್ಯವಾಗಿದೆ. ಆದ್ದರಿಂದ ಪ್ರತಿ ಮನುಷ್ಯನಲ್ಲೂ ಗುರಿ ತಲುಪುವ ಛಲ, ಪರಿಶ್ರಮ ಇದ್ದರೆ, ಸಾಧಕರಾಗುವುದು ಅಸಾಧ್ಯವಲ್ಲ ಎಂದು ಕಿವಿಮಾತು ಹೇಳಿದರು.
ನರ್ಸಿಂಗ್ ಪೂರೈಸಿದವರು ವಿಶ್ವದ ಯಾವ ಮೂಲೆಯಲ್ಲಾದರೂ ಉದ್ಯೋಗ ಪಡೆಯಲು ಅರ್ಹರು. ಅಷ್ಟರ ಮಟ್ಟಿಗೆ ಬೇಡಿಕೆ ಇದೆ. ವಿದೇಶಗಳಲ್ಲಿ ಐದಾರು ಲಕ್ಷ ರೂ. ವೇತನ ಪಡೆಯುವವರೂ ಇದ್ದಾರೆ. ಪವಿತ್ರವಾದ ಶುಶ್ರೂಷಕ ವೃತ್ತಿಯೂ ಸೇವಾ ಮನೋಭಾವದ ಜೊತೆಗೆ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಲಿದೆ ಎಂದರು.
ನಾವೆಲ್ಲರೂ ಕೆಳಸ್ತರದಿಂದ ಬಂದು ಕಷ್ಟಪಟ್ಟು ಸಾಧನೆಗೈದಿದ್ದೇವೆ. ನಮ್ಮ ಶ್ರಮದಿಂದ ನೂರಾರು ಮಂದಿಗೆ ಉದ್ಯೋಗ ನೀಡುವ ಕೆಲಸವಾದರೆ, ಜೀವನ ಸಾರ್ಥಕ. ಇಂತಹ ಚಿಂತನೆ ಯುವಸಮೂಹದಲ್ಲಿ ಬಂದರೆ, ದೇಶ ಮತ್ತಷ್ಟು ಬಲಗೊಳ್ಳಲಿದೆ ಎಂದು ಅಭಿಪ್ರಾಯಪಟ್ಟರು.
ತಂತ್ರಜ್ಞಾನವಿಲ್ಲದ ಬೋಧನೆ ಅಪೂರ್ಣ: ದಾವಣಗೆರೆ ವಿವಿ ಉಪ ಕುಲಪತಿ ಡಾ.ಬಿ.ಡಿ.ಕುಂಬಾರ್ ಮಾತನಾಡಿ, ಜಾಗತಿಕ ಮಟ್ಟದಲ್ಲಿ ಶಿಕ್ಷಣ ಕ್ಷೇತ್ರದಲ್ಲೂ ಸಾಕಷ್ಟು ಬದಲಾವಣೆ ಕಾಣುತ್ತಿದ್ದೇವೆ. ತಂತ್ರಜ್ಞಾನ ಇಲ್ಲದ ಬೋಧನೆಯೂ ಪ್ರಸ್ತುತ ದಿನಗಳಲ್ಲಿ ಅಪೂರ್ಣ ಎಂದು ತಿಳಿಸಿದರು.
ಸೈದ್ಧಾಂತಿಕ ಜ್ಞಾನವೇ ಬೇರೆ. ಶಾಲಾ-ಕಾಲೇಜುಗಳ ಕೊಠಡಿಗಳಲ್ಲಿ ಪಾಠ ಮಾಡುವುದೇ ಬೇರೆ. ಪ್ರಸ್ತುತ ಐಟಿ ಕರಗತ ಮಾಡಿಕೊಂಡಿರುವ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕಾದರೆ, ಶಿಕ್ಷಕರು, ಅಧ್ಯಾಪಕರಲ್ಲೂ ತಂತ್ರಜ್ಞಾನ, ಕೌಶಲ ಎರಡರ ಅಗತ್ಯವಿದೆ ಎಂದು ಸಲಹೆ ನೀಡಿದರು.
ಭಾರತದಿಂದ ವಿದೇಶಕ್ಕೆ ಪ್ರತಿ ವರ್ಷ 20ರಿಂದ 30 ಲಕ್ಷ ಮಂದಿ ಉನ್ನತ ವ್ಯಾಸಂಗಕ್ಕಾಗಿ ತೆರಳುತ್ತಿದ್ದಾರೆ. ಗುಣಮಟ್ಟದ ಕೊರತೆಯೇ ಇದಕ್ಕೆ ಪ್ರಮುಖ ಕಾರಣ. ಆದ್ದರಿಂದ ಶಿಕ್ಷಕರಾದವರು ಜ್ಞಾನದ ಜೊತೆ ತಂತ್ರಜ್ಞಾನ ಸಮರ್ಥವಾಗಿ ಮೈಗೂಡಿಸಿಕೊಂಡು ಪ್ರತಿ ನಿತ್ಯ ಹೊಸತನದೊಂದಿಗೆ ಬೋಧಿಸುವ ಮೂಲಕ ವಿದ್ಯಾರ್ಥಿಗಳ ಗಮನ ಸೆಳೆಯಬೇಕಿದೆ ಎಂದು ಕಿವಿಮಾತು ಹೇಳಿದರು.
ಕೌಶಲ ಇಲ್ಲದಿದ್ದರೆ, ಯಾವ ಪದವಿ ಪಡೆದರೂ ಉದ್ಯೋಗ ಸಿಗಲಾರದು. ಈ ಕಾರಣಕ್ಕಾಗಿ ದಾವಣಗೆರೆ ವಿಶ್ವವಿದ್ಯಾಲಯದಿಂದ 2024-25ನೇ ಸಾಲಿನಿಂದ ವಿದ್ಯಾರ್ಥಿಗಳಲ್ಲಿ ಕೌಶಲಾಭಿವೃದ್ಧಿ ಹೆಚ್ಚಿಸಲು ಆದ್ಯತೆ ನೀಡಲಾಗಿದೆ ಎಂದು ಕುಂಬಾರ್ ತಿಳಿಸಿದರು.
ಸಂಸ್ಥೆಯ ಸಿಇಒ ಎಂ.ಸಿ.ರಘುಚಂದನ್ ಮಾತನಾಡಿ, ಕುಗ್ರಾಮದಲ್ಲಿ ಜನಿಸಿದ ಸಾಮಾನ್ಯ ವ್ಯಕ್ತಿ ಈ ಶಿಕ್ಷಣ ಸಂಸ್ಥೆ ಕಟ್ಟಿ ಬೆಳೆಸಿದ್ದು, ಲಾಭದ ದೃಷ್ಟಿಯಿಂದಲ್ಲ. 41 ವರ್ಷದಿಂದ ಮುನ್ನಡೆಸುತ್ತಿರುವುದು ಸುಲಭದ ಮಾತಲ್ಲ. 5 ಸಾವಿರಕ್ಕೂ ಹೆಚ್ಚು ಮಂದಿ ವ್ಯಾಸಂಗ ಮಾಡುತ್ತಿದ್ದಾರೆ. 3,700 ಶಿಕ್ಷಕರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದೆ ಎಂದರು.
ಸಂಸ್ಥೆಯಲ್ಲಿ ಓದಿದವರು ಡಿಸಿ, ಎಡಿಸಿ, ಸಿಇಒ, ಎಸ್‌ಪಿ, ತಹಸೀಲ್ದಾರ್‌ಗಳಾಗಿದ್ದಾರೆ. ವಿದೇಶಗಳಲ್ಲಿ ನರ್ಸ್‌ಗಳಾಗಿ ಕೆಲವರು ಕಾರ್ಯನಿರ್ವಹಿಸುತ್ತಿದ್ದಾರೆ. ವಿವಿಧ ರೀತಿಯ ರಂಗಗಳಲ್ಲಿ ಗುರುತಿಸಿಕೊಳ್ಳುವ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ತಯಾರು ಮಾಡಲಾಗುತ್ತಿದೆ ಎಂದು ತಿಳಿಸಿದರು.
ವೈದ್ಯಕೀಯ ಕಾಲೇಜು ಆರಂಭಿಸಲು ತೀರ್ಮಾನಿಸಿದ್ದು, ವಿದ್ಯೆಯ ಜೊತೆಗೆ ವಿನಯ ಕಲಿಸುವ ಕೆಲಸವನ್ನೂ ಮಾಡಲಾಗುತ್ತಿದೆ ಎಂದರು.
ಇದೇ ವೇಳೆ 410ಕ್ಕೂ ಹೆಚ್ಚು ಮಂದಿ ಪದವೀಧರರು ಪದವಿ ಸ್ವೀಕರಿಸಿದರು. ಸಂಸ್ಥೆಯ ಆಡಳಿತಾಧಿಕಾರಿ ಎಚ್.ಚಂದ್ರಕಲಾ, ಅಧ್ಯಕ್ಷೆ ಯಶಸ್ವಿನಿ ಕಿರಣ್, ಪ್ರಾಚಾರ್ಯರಾದ ಡಾ.ಬಿ.ಸಿ.ಅನಂತರಾಮು, ಡಾ.ಎ.ಜೆ.ಶಿವಕುಮಾರ್, ಎಂ.ಎಂ.ಮಹಂತೇಶ್, ಡಾ.ಎಂ.ಎನ್.ಪಾಲಾಕ್ಷ ಇತರರಿದ್ದರು.