ಉದ್ಯೋಗ ಮೇಳಕ್ಕೆ ಬಂತು ವಿದ್ಯಾರ್ಥಿ ದಂಡು

Lingraj appa collage
Published on

ಬೀದರ್: ಜಿಲ್ಲಾಡಳಿತ ಸಹಯೋಗದಿಂದ ನಗರದ ಹೊರವಲಯದ ಗೊರನಳ್ಳಿ ಸಮೀಪದ ಲಿಂಗರಾಜ ಅಪ್ಪ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳಕ್ಕೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಯಿತು. ಕರೊನಾ ಭೀತಿ ನಡುವೆ ಸಾಮಾಜಿಕ ಅಂತರ ಕಾಪಾಡಿಕೊಂಡು ಸಹಸ್ರಾರು ಉದ್ಯೋಗಾಂಕ್ಷಿಗಳು ವಿವಿಧ ಕಂಪನಿಗಳ ನೇರ ಸಂದರ್ಶನದಲ್ಲಿ ಭಾಗಿಯಾದರು.

ಆನ್ ಲೈನ್ ನಲ್ಲಿ 2200ಕ್ಕೂ ಅಧಿಕ ಮತ್ತು ಒಂದು ಸಾವಿರಕ್ಕೂ ಹೆಚ್ಚು ಮಂದಿ ಕಾಲೇಜಿನಲ್ಲಿ ಹೆಸರು ನೋಂದಾಯಿಸಿ ಪಾಲ್ಗೊಂಡರು. ಕರೊನಾದಿಂದ ಉದ್ಯೋಗ ಕಳೆದುಕೊಂಡು ಮುಂಬೈ, ಪುಣೆ, ಹೈದರಾಬಾದ್, ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ಮರಳಿರುವ ಬಿಇ, ಎಂಟೆಕ್, ಎಂಸಿಎ, ಎಂಬಿಎ, ಬಿಎಸ್ಸಿ, ಬಿಸಿಎ, ಬಿಬಿಎಂ, ಬಿಕಾಂ, ಡಿಪ್ಲೊಮಾ ಸೇರಿದಂತೆ ವಿವಿಧ ವೃತ್ತಿಪರ ಕೋಸ್೯ ಅಭ್ಯರ್ಥಿಗಳು ಮೇಳದಲ್ಲಿ ಪಾಲ್ಗೊಂಡರು. 44 ಕಂಪನಿ ಪ್ರತಿನಿಧಿಗಳು ಹಾಜರಿದ್ದು ಸಂದರ್ಶನ ಪಡೆದರು.

ಟಾಟಾ ಸ್ಟ್ರೈವ್, ಟಾಟಾ ಮೋಟಾರ್ಸ್, ಜಿಯೊ, ಏರ್ಟೆಲ್, ವೊಡಾಫೋನ್, ಐಡಿಯಾ, ಟಿವಿಎಸ್, ಎಚ್ಸಿಎಲ್, ಟೆಕ್ ಮಹೀಂದ್ರಾ, ಪೇಟಿಎಂ, ಐಸುಝು ಮೋಟಾಸ್೯, ಕಾರ್ವಿ ಫೈನಾನ್ಸ್, ಆ್ಯಕ್ಟ್ ಫೈನಾನ್ಸ್ ಸೇರಿದಂತೆ ವಿವಿಧ ಬಹುರಾಷ್ಟ್ರೀಯ ಹಾಗೂ ರಾಷ್ಟ್ರೀಯ ಕಂಪನಿಗಳ ಮಾನವ ಸಂಪನ್ಮೂಲ ವಿಭಾಗ (ಎಚ್ ಆರ್ ಡಿ) ಪ್ರತಿನಿಧಿಗಳು ಅಭ್ಯರ್ಥಿಗಳ ಶೈಕ್ಷಣಿಕ ದಾಖಲೆ, ಸೇವಾ ಅನುಭವ ಇತರೆ ವಿವರ ಪರಿಶೀಲಿಸಿ, ಮೌಖಿಕ ಸಂದರ್ಶನ ನಡೆಸಿದರು. ಕೌಶಲ ಪರೀಕ್ಷೆಯೂ ಮಾಡಿದರು.

ಕರೊನಾ ಕಾರಣ ಅಭ್ಯರ್ಥಿಗಳು ಹಾದುಹೋಗುವ ಕಾಲೇಜು ಪ್ರವೇಶ ದ್ವಾರದಲ್ಲೇ ಕ್ರಿಮಿನಾಶಕ ದ್ರಾವಣವು ಸಿಂಪಡಿಸುವ ಸೆನ್ಸರ್ ಆಧರಿತ ಟನೆಲ್ ಅಳವಡಿಸಲಾಗಿತ್ತು. ಇದರ ಮೂಲಕ ಒಳಗೆ ಬಂದ ಅಭ್ಯರ್ಥಿಗಳ ಉಷ್ಣಾಂಶ ತಪಾಸಣೆ ಮಾಡಿ, ಕೈಗೆ ಸ್ಯಾನಿಟೈಸರ್ ಹಾಕಿ, ಮೇಳದ ಸ್ಥಳಕ್ಕೆ ಬಿಡಲಾಯಿತು. ಮಾಸ್ಕ್ ಧರಿಸದೆ ಬಂದಿದ್ದ ಕೆಲವರಿಗೆ ಸ್ಥಳದಲ್ಲೇ ಮಾಸ್ಕ್ ಒದಗಿಸಲಾಯಿತು. ಮೇಳದ ಸ್ಥಳದಲ್ಲಿ ಸಾಮಾಜಿಕ ಅಂತರ ಕಾಪಾಡಲು ಗುರುತುಗಳನ್ನು ಹಾಕಲಾಗಿತ್ತು.

ಪ್ರಾಚಾರ್ಯ ಡಾ. ಸಂಜೀವರೆಡ್ಡಿ ಹುಡಗಿಕರ್ ಮಾತನಾಡಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಶರಣಬಸವಪ್ಪ ಅಪ್ಪ ಅವರು ವಿವಿಧ ಕಂಪನಿಗಳನ್ನು ಆಹ್ವಾನಿಸಿ ಮೇಳ ಸಂಘಟಿಸಿ ಈ ಭಾಗದ ಉದ್ಯೋಗಾಕಾಂಕ್ಷಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಜಿಲ್ಲೆ ಮಾತ್ರವಲ್ಲದೆ ವಿವಿಧೆಡೆಯ ಅಭ್ಯರ್ಥಿಗಳು ಭಾಗಿಯಾಗಿ ಲಾಭ ಪಡೆದಿದ್ದಾರೆ ಎಂದರು.

ಕಾಲೇಜು ನಿರ್ದೇಶಕ ಶರಣಬಸಪ್ಪ ದೇಶಮುಖ ಉದ್ಘಾಟಿಸಿದರು. ಉಪ ಪ್ರಾಚಾರ್ಯ ವಿನಿತಾ ಪಾಟೀಲ್, ಮನೀಶ್, ವಿವಿಧ ಕಂಪನಿಗಳ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರು ಇದ್ದರು. ವಿವಿಧೆಡೆಯಿಂದ ಆಗಮಿಸಿದ ವಿದ್ಯಾರ್ಥಿಗಳಿಗೆ ಚಿಟ್ಟಾ ಕ್ರಾಸ್ನಿಂದ ಕಾಲೇಜುವರೆಗೆ ವಾಹನ ವ್ಯವಸ್ಥೆ ಮಾಡಲಾಗಿತ್ತು.

ಕರೊನಾ ವೇಳೆ ಕೆಲಸ ಕಳೆದುಕೊಂಡ ಪದವೀಧರ ನಿರುದ್ಯೋಗಿಗಳಿಗೆ ನೆರವಾಗಲು ಮೇಳ ಸಂಘಟಿಸಲಾಗಿದೆ. ಉನ್ನತ ಪದವಿಗಳು ಪಡೆದವರೂ ಇಂದು ಸಣ್ಣಪುಟ್ಟ ಕೆಲಸ ಮಾಡಿ ಬದುಕು ಸಾಗಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಸಂಸ್ಥೆ ಅಧ್ಯಕ್ಷ ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಅವರು ಒಳ್ಳೆಯ ಅವಕಾಶ ಕಲ್ಪಿಸಿದ್ದಾರೆ. ಜಿಲ್ಲಾಡಳಿತವೂ ಎಲ್ಲ ರೀತಿಯ ಸಹಕಾರ ನೀಡಿದ ಕಾರಣ ಮೇಳ ಯಶಸ್ವಿಯಾಗಿದೆ.ಶರಣಬಸಪ್ಪ ದೇಶಮುಖಶಣಬಸವೇಶ್ವರ ವಿದ್ಯಾವರ್ಧಕ ಸಂಘ ಕಾರ್ಯದರ್ಶಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net