ಉದ್ಯೋಗ ಮೇಳ ವ್ಯವಸ್ಥಿತವಾಗಿರಲಿ

CTD dc meeting mela---.
Published on

ಚಿತ್ರದುರ್ಗ: ನಗರದ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ಮಾ.1ರಂದು ನಡೆಯಲಿರುವ ಬೃಹತ್ ಉದ್ಯೋಗ ಮೇಳದಲ್ಲಿ 5 ಸಾವಿರಕ್ಕೂ ಹೆಚ್ಚಿನ ಯುವ ಜನರಿಗೆ ಉದ್ಯೋಗ ನೀಡಲು 50 ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸುತ್ತಿವೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.

ಡಿಸಿ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಿಲ್ಲಾ ಕೌಶಲ ಮಿಷನ್‌ನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಮೇಳವನ್ನು ಶಿಸ್ತು ಬದ್ಧವಾಗಿ ಆಯೋಜಿಸಲು ಹಾಗೂ ಜಿಲ್ಲೆಯ ಹೆಚ್ಚಿನ ಯುವ ಜನರಿಗೆ ಉದ್ಯೋಗ ಸೃಜಿಸಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. ಆನ್‌ಲೈನ್ ನೋಂದಣಿ ಮಾಡಿಕೊಂಡವರಿಗೆ ಸಂದರ್ಶನದಲ್ಲಿ ಆದ್ಯತೆ ಕೊಡಬೇಕು. ಆನ್‌ಲೈನ್‌ನಲ್ಲಿ ನೊಂದಣಿಯಾಗದವರಿಗೆ ಮೇಳ ನಡೆಯುವ ಮೈದಾನದಲ್ಲಿ ಹೆಚ್ಚಿನ ಕೌಂಟರ್‌ಗಳನ್ನು ಸ್ಥಾಪಿಸಬೇಕು. ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿ ಟೋಕನ್ ನೀಡಬೇಕು ಎಂದರು.

ಕಂಪನಿಗಳು, ಲಭ್ಯ ಹುದ್ದೆಗಳು ಹಾಗೂ ಆಯ್ಕೆ ಕುರಿತಂತೆ ಮಾಹಿತಿ ಪ್ರದರ್ಶಿಸಬೇಕು. ಇದರಿಂದ ಅನಗತ್ಯ ಗೊಂದಲ ತಪ್ಪಿಸಬಹುದು. ಅಗತ್ಯ ಮೂಲ ಸೌಕರ್ಯ ಕಲ್ಪಿಸಬೇಕು. ಯಾವ ಸಂಖ್ಯೆಯ ಮಳಿಗೆಯಲ್ಲಿ ಯಾವ ಕಂಪನಿ, ಹುದ್ದೆಗಳು ಲಭ್ಯವಿದೆ ಎಂಬುದರ ಬಗ್ಗೆ ಧ್ವನಿವರ್ಧಕದ ಮೂಲಕ ಮಾಹಿತಿ ನೀಡಬೇಕು. ಅನಗತ್ಯವಾಗಿ ಓಡಾಡಲು ಅವಕಾಶ ಮಾಡಿಕೊಡಬಾರದು ಎಂದು ಡಿಸಿ ಸೂಚಿಸಿದರು.

ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ವೇಮಣ್ಣ ಮಾತನಾಡಿ, ಕರ್ನಾಟಕ ಕೌಶಲಾಭಿವೃದ್ಧಿ ನಿಗಮ 2022-23ನೇ ಸಾಲಿನಲ್ಲಿ ಸಿಎಂಕೆಕೆವೈ ಯೋಜನೆಯಡಿ ಟೈಲರ್ ಜಾಬ್‌ರೂಲ್‌ನಲ್ಲಿ ತರಬೇತಿ ಪಡೆದ 149 ಫಲಾನುಭವಿಗಳಿಗೆ 149 ಹೊಲಿಗೆ ಯಂತ್ರ ಹಾಗೂ ಟೂಲ್‌ಕಿಟ್ ಗಳನ್ನು ವಿತರಿಸಲಿದೆ. ವಿಶ್ವಕರ್ಮ ಯೋಜನೆಯಡಿ 39,625 ಫಲಾನುಭವಿಗಳ ಪೈಕಿ 34,234 ಜನರಿಗೆ ತರಬೇತಿ ನೀಡಲಾಗಿದೆ ಎಂದರು.

ಡೇ-ನಲ್ಮ್ ಯೋಜನೆ, ಪಿಎಂ ಸ್ವ-ನಿಧಿ ಮತ್ತು ಸ್ವ-ನಿಧಿ ಸೇ ಸಮೃದ್ಧಿ ಯೋಜನೆ ಪ್ರಗತಿ ಪರಿಶೀಲಿಸಲಾಯಿತು. ಇದೇ ವೇಳೆ ಉದ್ಯೋಗ ಮೇಳದ ಪೋಸ್ಟರ್‌ಗಳನ್ನು ಜಿಲ್ಲಾಧಿಕಾರಿ ಬಿಡುಗಡೆಗೊಳಿಸಿದರು.

ಎಡಿಸಿ ಬಿ.ಟಿ. ಕುಮಾರಸ್ವಾಮಿ, ಎಸಿ ಡಾ. ವೆಂಕಟೇಶ್‌ನಾಯ್ಕ, ಜಿಪಂ ಯೋಜನಾ ನಿರ್ದೇಶಕಿ ಗಾಯತ್ರಿ, ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಆನಂದ್, ಜಂಟಿ ಕೃಷಿ ನಿರ್ದೇಶಕ ಮಂಜುನಾಥ್, ಆಹಾರ ಇಲಾಖೆ ಜಂಟಿ ನಿರ್ದೇಶಕ ಮಧುಸೂದನ್ ಮತ್ತಿತರ ಅಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net