

ಮೈಸೂರು: ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದ್ದು, ಉದ್ಯೋಗ ಗಿಟ್ಟಿಸಿಕೊಳ್ಳುವ ದೃಷ್ಟಿಯಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಮಾಡಬೇಕು. ಅದಕ್ಕೆ ಬೇಕಾದ ಕೌಶಲವನ್ನೂ ಮೈಗೂಡಿಸಿಕೊಳ್ಳಬೇಕು ಎಂದು ಶಾಸಕ ಜಿ.ಡಿ.ಹರೀಶ್‌ಗೌಡ ಹೇಳಿದರು.
ಎಸ್‌ಬಿಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ವಿದ್ಯಾರ್ಥಿ ಸಂಸತ್ ಮತ್ತು ಪ್ರತಿಭಾ ವೇದಿಕೆಯ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಷ್ಟಪಟ್ಟು ಓದುವುದಕ್ಕಿಂತ ಇಷ್ಟಪಟ್ಟು ಓದಿದರೆ ಮಾತ್ರ ಯಶಸ್ಸು ಕಾಣಲು ಸಾಧ್ಯ. ಉದ್ಯೋಗ ದೃಷ್ಟಿಯಲ್ಲಿ ಓದಬೇಕು, ಕೌಶಲವನ್ನು ಬೆಳೆಸಿಕೊಳ್ಳಬೇಕು. ಇಲ್ಲದಿದ್ದರೆ, ಪಾಲಕರು ತಮ್ಮ ಮಕ್ಕಳ ಉದ್ಯೋಗಕ್ಕಾಗಿ ರಾಜಕೀಯ ವ್ಯಕ್ತಿಗಳ ಮತ್ತು ಬೇರೆಯವರ ಮುಂದೆ ಸ್ವಾಭಿಮಾನ ಬಿಟ್ಟು ಕೈಚಾಚಿ ನಿಲ್ಲುವಂತಾಗುತ್ತದೆ ಎಂದರು.
ನಾನು ಸಹ ಇದೇ ಸಂಸ್ಥೆಯಲ್ಲಿ ಪಿಯುಸಿ ವ್ಯಾಸಂಗ ಮಾಡಿದ್ದೆ. ನಾನು ಓದುವ ಸಂದರ್ಭದಲ್ಲಿ ರಾಜಕೀಯಕ್ಕೆ ಬರುವ ಯಾವ ಚಿಂತನೆಯೂ ಇರಲಿಲ್ಲ. ಎಂ.ಎಸ್. ಓದಬೇಕು ಎಂದು ವಿದೇಶಕ್ಕೆ ಹೋಗಿದ್ದೆ. ಆದರೆ, ಭಾರತಕ್ಕೆ ವಾಪಸ್ ಬಂದಾಗ ಆಕಸ್ಮಿಕವಾಗಿ ಚುನಾವಣೆಗೆ ಧುಮುಕಿ, ರಾಜಕೀಯದಲ್ಲಿ ಸಕ್ರಿಯನಾಗಿರುವೆ ಎಂದರು.
ಬದುಕು ನಾವು ಅಂದುಕೊಂಡಂತೆ ಇರುವುದಿಲ್ಲ. ಅನೇಕ ದಾರಿಗಳು, ಸವಾಲುಗಳು ಬರುತ್ತವೆ. ಅದಕ್ಕೆ ನಾವು ಸಿದ್ಧರಿರಬೇಕು. ಈ ಎಲ್ಲ ಹಂತಗಳನ್ನು ಎದುರಿಸಲು ನಮಗೆ ಮುಖ್ಯವಾಗಿ ಬೇಕಾಗಿರುವುದು ಧೈರ್ಯ, ಆತ್ಮವಿಶ್ವಾಸ. ನಾವು ಓದುವುದಕ್ಕೂ, ಮುಂದೆ ನಮ್ಮ ಜೀವನದಲ್ಲಿ ನಡೆಯುವುದಕ್ಕೂ ಸಂಬಂಧವಿರುವುದಿಲ್ಲ. ಓದುವುದೇ ಬೇರೆ, ಮಾಡುವುದೇ ಬೇರೆ ಎಂದರು.
ಬೆಂಗಳೂರಿನ ಗಾಂಧಿ ಸ್ಮಾರಕ ನಿಧಿಯ ನಿರ್ದೇಶಕ ಪ್ರೊ.ಜಿ.ಬಿ.ಶಿವರಾಜು ಮಾತನಾಡಿ, ಮೊದಲು ಮಾನವರನ್ನಾಗಿಸಿ, ಮನುಷ್ಯತ್ವ ಕಲಿಸುವುದೇ ವಿದ್ಯೆ. ಮನುಷ್ಯನ ಶ್ರೇಷ್ಠ ಚಿಂತನೆಗಳೇ ಜೀವನದಲ್ಲಿ ನಮ್ಮನ್ನು ಬಹಳ ಎತ್ತರಕ್ಕೆ ತೆಗೆದುಕೊಂಡು ಹೋಗುವುದು. ಯುವಕರೇ ರಾಷ್ಟ್ರದ ಆತ್ಮ, ನೀವೇ ದೇಶದ ಅಭಿವೃದ್ಧಿ. ಈ ನಿಟ್ಟಿನಲ್ಲಿ ಗಾಂಧಿಯ ತತ್ವವನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ನಟಿ ಅನುಷಾ ರೈ ಮಾತನಾಡಿ, ಜೀವನದಲ್ಲಿ ಕಲಿತ ವಿದ್ಯೆಯನ್ನು ಯಾರೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ವಿದ್ಯೆಯನ್ನು ಚೆನ್ನಾಗಿ ಕಲಿತರೆ ಜಗತ್ತಿನಲ್ಲಿ ಎಲ್ಲಿ ಬೇಕಾದರೂ ಬದುಕಬಹುದು. ಇದನ್ನು ನೆನಪಿಟ್ಟುಕೊಂಡು ವಿದ್ಯಾರ್ಥಿಜೀವನ ಅರ್ಥಪೂರ್ಣವಾಗಿ ಸಾಗಿಸಬೇಕು ಎಂದು ನುಡಿದರು.
‘ವರ್ಷದ ಅತ್ಯುತ್ತಮ ವಿದ್ಯಾರ್ಥಿ’ ನಿದಾ ತರನ್ನುಂ ಅವರನ್ನು ಸನ್ಮಾನಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಯಿತು. ಸಾಂಸ್ಕೃತಿಕ, ಎನ್‌ಸಿಸಿ, ಎನ್‌ಎಸ್‌ಎಸ್, ರೋಟರ‌್ಯಾಕ್ಟ್ ಕ್ಲಬ್, ಅತ್ಯುತ್ತಮ ಸ್ವಯಂಸೇವಕ, ಗ್ರಂಥಾಲಯ ಬಳಕೆ, ಹಾಜರಾತಿ, ಕ್ರೀಡೆ ಇನ್ನಿತರ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ಸುಮಾರು 35 ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ, ಪರೀಕ್ಷಾಂಗ ನಿಯಂತ್ರಣಾಧಿಕಾರಿ ಶ್ರುತಿ ಪೂಣಚ್ಚ, ಮಹಾಜನ ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾದ ಡಾ ಸಿ.ಕೆ.ರೇಣುಕಾರ್ಯ, ಪ್ರಾಂಶುಪಾಲೆ ಡಾ.ಬಿ.ಆರ್.ಜಯಕುಮಾರಿ, ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ಎಸ್.ಆರ್.ರಮೇಶ್, ಪ್ರತಿಭಾ ವೇದಿಕೆಯ ಸಂಚಾಲಕ ಎಂ.ನಾಗೇಶ, ವಿದ್ಯಾರ್ಥಿ ಸಂಸತ್‌ನ ಸಂಚಾಲಕಿ ಡಾ.ಪಿ.ಜಿ.ಪುಷ್ಪಾರಾಣಿ, ಸಹಾಯಕ ಪ್ರಾಧ್ಯಾಪಕ ಸುನೀಲ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.