

ಸಾಗರ: ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಕನ್ನಡ ಭಾಷೆಯ ಜತೆಗೆ ಇಂಗ್ಲಿಷ್ ಕಲಿಕೆ ಅನಿವಾರ್ಯ ಎಂದು ಮಾಲ್ವೆ ಗ್ರಾಪಂ ಉಪಾಧ್ಯಕ್ಷೆ ನಾಗರತ್ನಾ ದೇವಪ್ಪ ಹೇಳಿದರು.
ಮಾಲ್ವೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಗುರುವಾರ ಇಂಗ್ಲಿಷ್ ಮಾಧ್ಯಮ ಶಿಕ್ಷಣಕ್ಕೆ ಚಾಲನೆ ನೀಡಿ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಣ ವ್ಯವಸ್ಥೆಗೆ ಒತ್ತು ನೀಡಬೇಕು. ಗ್ರಾಮೀಣ ಭಾಗದ ಶಾಲೆಗಳಲ್ಲಿ ಇಂಗ್ಲಿಷ್‌ಗೆ ಮಹತ್ವ ನೀಡುವ ಅಗತ್ಯವಿದೆ. ಇಂಗ್ಲಿಷ್ ಭಾಷೆ ಕಲಿಸಲು ಶಿಕ್ಷಕರು ಹೆಚ್ಚು ಶ್ರಮ ವಹಿಸಬೇಕು ಎಂದು ತಿಳಿಸಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಮಾಲತೇಶ್ ಮಾತನಾಡಿ, ಉದ್ಯೋಗ ಕ್ಷೇತ್ರಕ್ಕೆ ಇಂಗ್ಲಿಷ್ ಭಾಷಾ ಜ್ಞಾನ ಅಗತ್ಯ. ಮಾಲ್ವೆ ಸರ್ಕಾರಿ ಶಾಲೆಯಲ್ಲಿ ಆರಂಭಿಸಿರುವುದು ಸಂತಸದ ಸಂಗತಿ ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ದೇವರಾಜ್, ಕ್ಷೇತ್ರ ಸಮನ್ವಯಾಕಾರಿ ಡಾ. ಅನ್ನಪೂರ್ಣಾ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಭೂಮೇಶ್, ಪ್ರಮುಖರಾದ ಶೋಭಾ ರಾಮಕೃಷ್ಣ, ಪ್ರಕಾಶ್, ಮಹಾಬಲೇಶ್ವರ, ವಿದ್ಯಾವತಿ, ಶಿಕ್ಷಣ ಸಂಯೋಜಕ ಪಾಲಾಕ್ಷಪ್ಪ, ದಿನೇಶ್, ಅನಿತಾ ಇತರರಿದ್ದರು.